ಪುಂಜಾಲಕಟ್ಟೆ, ಏ 23 (Daijiworld News/MSP): ತನ್ನ ಮನೆಯಿಂದಲೇ ಕಳ್ಳತನವೆಸಗಿ ಆ ಬಳಿಕ ಕಳ್ಳತನ ನಡೆದಿದೆ ಎಂದು ಪ್ರಕರಣ ದಾಖಲಿಸಿದ ವ್ಯಕ್ತಿಯು ತಾನೇ ತೋಡಿದ ಖೆಡ್ಡಾಕ್ಕೆ ಬಿದ್ದ ಪೊಲೀಸರ ಅತಿಥಿಯಾದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಗಂಪದಡ್ಡದಲ್ಲಿ ನಡೆದಿದೆ.
ಏ.19ರಂದು ಯೂಸುಬ್ ಬ್ಯಾರಿ ಎಂಬರವರ ಮನೆಯಲ್ಲಿ ಕಳವು ನಡೆದಿದೆ ಎಂದು ಅವರ ಮಗನಾದ ಸಾದಿಕ್ (30) ಎಂಬಾಂತ ಪೊಲೀಸರಿಗೆ ದೂರು ನೀಡಿದ್ದ. ಆದ್ರೆ ಈ ಬಗ್ಗೆ ಸಂಶಯ ಬಂದು ಪೊಲೀಸರು ದೂರುದಾರನನ್ನೇ ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಇಸ್ಪೀಟ್ ಚಟಕ್ಕೆ ಬಿದ್ದು ಸಾಕಷ್ಟು ಸಾಲ ಮಾಡಿಕೊಂಡಿದ್ದು ಇದನ್ನು ತೀರಿಸಲು ತನ್ನ ಮನೆಯಲ್ಲಿ ತಾನೇ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿದ್ದು, ಕಳವಾಗಿದ್ದ 62 ಗ್ರಾಂ ತೂಕದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ :
ಏ.19ರಂದು ಯೂಸುಬ್ ಬ್ಯಾರಿಯ ಮನೆಯವರು ಹಾಗೂ ಸಂಬಂಧಿಕರಾದ ನೆರೆಮನೆಯವರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದರು. ಆದರೆ ಸಂಜೆ ವೇಳೆಗೆ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡುಬಂದಿದೆ. ಕಪಾಟನ್ನು ಒಡೆದು ಒಳಗಿದ್ದ ಚಿನ್ನದ ಒಡವೆಗಳು ಹಾಗೂ ನಗದನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಸಾದಿಕ್ ದೂರು ನೀಡಿದ್ದ.
ಪ್ರಕರಣದ ತನಿಖೆ ನಡೆಸಿದ ದ.ಕ. ಎಸ್ಪಿ ಲಕ್ಷ್ಮೀ ಪ್ರಸಾದ್, ಅಡಿಷನಲ್ ಎಸ್ಪಿ ವಿಕ್ರಮ್ ಅಮಟೆ ಮತ್ತು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅದಾವತ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ಕುಮಾರ್ ಮತ್ತು ಪುಂಜಾಲಕಟ್ಟೆ ಎಸ್ಐ ಕೆ.ಆರ್. ಸುನೀತಾ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.