ಮಂಗಳೂರು, ನ 16: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವವೂ ಜೋರಾಗಿದೆ. ಹೀಗಾಗಿ ಕರಾವಳಿಯಲ್ಲಿ ಹಲವು ದಿನಗಳಿಂದ ಹಬ್ಬಿದ್ದ ಸುದ್ದಿಗೆ ಮತ್ತೆ ಜೀವ ತುಂಬಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಲಿದ್ದಾರೆ ಎನ್ನುವ ಗುಸುಪಿಸು ಮಾತುಗಳು ರಾಜಕೀಯ ವಲಯದಲ್ಲೂ ಜೋರಾಗಿಯೇ ಹರಿದಾಡ್ತಾ ಇದೆ. ಇದಕ್ಕೆ ಜೀವ ತುಂಬುವಂತೆ ಬುಧವಾರ ನಗರದ ನೆಹರು ಮೈದಾನದಲ್ಲಿ ನಡೆದ ಸಹಕಾರ ಸಪ್ತಾಹದ ಬಹಿರಂಗ ಸಭೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿಕೆ ಕರಾವಳಿ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಂಸದ ನಳೀನ್ ಕುಮಾರ್ ತಮ್ಮ ಭಾಷಣದಲ್ಲಿ 'ಇನ್ನು ಕೆಲವೇ ದಿನಗಳಲ್ಲಿ ನೀವು (ಪ್ರಮೋದ್ ಮಧ್ವರಾಜ್) ನಮ್ಮೊಟ್ಟಿಗೆ ಬರಲಿದ್ದೀರಿ' ಎಂಬ ಮಾತುಗಳು ಇದಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟಂತಿವೆ. ಮಾತು ಮುಗಿಸಿ ಆಸೀನರಾದ ನಳೀನ್ ಕುಮಾರ್ ಕಟೀಲ್ ಜೊತೆ ಸಚಿವ ಪ್ರಮೋದ್ ಮಧ್ವರಾಜ್ ಹಸ್ತಲಾಘವ ಮಾಡಿದ್ದು, ಪ್ರಮೋದ್ ಮಧ್ವರಾಜ್ ಅವರ ಬಿಜೆಪಿ ಬಗೆಗಿನ ಮೃದು ಧೋರಣೆ ಸದ್ಯ ತೀವ್ರ ಚರ್ಚೆಗೆ ಕಾರಣವಾಗಿದೆ.