ಹೆಬ್ರಿ, ಎ25(Daijiworld News/SS): ಈ ತಿಂಗಳ ಅವಧಿಯಲ್ಲಿ ಮುಗಿಯಬೇಕಿದ್ದ ಆಗುಂಬೆ ಘಾಟಿ ರಸ್ತೆಯ ದುರಸ್ತಿ ಕಾಮಗಾರಿ ಆಮೆಗತಿಯಿಂದ ಸಾಗುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ಆರಂಭವಾಗುವ ಮೊದಲು ಎಪ್ರಿಲ್ 1ರಿಂದ 30ರವರೆಗೆ ಒಂದು ತಿಂಗಳ ಕಾಲ ರಾಷ್ಟ್ರೀಯ ಹೆದ್ದಾರಿ 169 ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ 3 ತಿಂಗಳ ಅವಕಾಶ ಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ವಿಪರ್ಯಾಸವೆಂದರೆ, ಕುಸಿತ ಸಂಭವಿಸಿರುವಲ್ಲಿ ಇನ್ನೂ ಕಾಮಗಾರಿಯೇ ಆರಂಭಗೊಂಡಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಘಾಟಿ ಬಂದ್ ಆಗಿ 21 ದಿನ ಕಳೆದಿದ್ದು 14ನೇ ತಿರುವು ಹಾಗೂ 7ನೇ ತಿರುವಿನ ದುರಸ್ತಿ ಪೂರ್ಣಗೊಳ್ಳಲು ಇನ್ನೂ 2 ತಿಂಗಳು ಬೇಕು ಎನ್ನಲಾಗಿದೆ. ಆರಂಭದಲ್ಲಿ ಕಾಮಗಾರಿ ಪೂರ್ಣಗೊಳ್ಳಲು 1 ತಿಂಗಳು ಮಾತ್ರ ಸಾಕು ಎಂದು ಹೇಳಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಆಗುಂಬೆ ಘಾಟಿ ರಸ್ತೆಯ ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯ 14ನೇ ತಿರುವು ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯ 7ನೇ ತಿರುವಿನಲ್ಲಿ ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿದಿತ್ತು. ಸ್ಥಳದಲ್ಲಿ ಮರಳು ಚೀಲಗಳನ್ನು ಪೇರಿಸಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. 10 ತಿಂಗಳ ಬಳಿಕ ಕೊನೆಗೂ ದುರಸ್ತಿ ಕಾಮಗಾರಿಗೆ ಅನುಮತಿ ಲಭಿಸಿದೆ. ಆದರೆ ಅಪಾಯಕಾರಿ ಸ್ಥಳದಲ್ಲಿ ದುರಸ್ತಿ ನಡೆಸುವ ಬದಲು ಅತೀ ಅಗತ್ಯವಲ್ಲದ ಆನೆಕಲ್ಲಿನ ಬಳಿ ಕಾಮಗಾರಿ ನಡೆಯುತ್ತಿದೆ.