ಉದ್ಯಾವರ,ಏ 25(Daijiworld News/MSP): ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆ ಬಳಿ ಪಾಪನಾಶಿನಿ ನದಿಗೆ ಹಾರಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳೆಗೆ ಹಾರಿರುವ ವ್ಯಕ್ತಿಯನ್ನು ಉದ್ಯಾವರ ನಿವಾಸಿ, ಬಿಜೆಪಿ ಮುಖಂಡ ಅಶೋಕ ಅಮೀನ್ (38) ಎಂದು ಗುರುತಿಸಲಾಗಿದೆ.
ಏ.25 ರ ಗುರುವಾರ ಬೆಳಿಗ್ಗೆ ತನ್ನ ಮನೆಯಿಂದ ಹೊರಟ ಅಶೋಕ್ ಉದ್ಯಾವರದ ಹೆದ್ದಾರಿ ಸೇತುವೆ ಬಳಿ ತನ್ನ ಬೈಕ್ ನ್ನು ನಿಲ್ಲಿಸಿ ಹೊಳೆಗೆ ಹಾರಿದ್ದನ್ನು ಪ್ರತ್ಯಕ್ಷದರ್ಶಿ ನೋಡಿದ್ದರು. ತಕ್ಷಣ ಸ್ಥಳೀಯರು ಕಾಪು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದು ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಹುಡುಕಾಟ ಪ್ರಾರಂಭಿಸಿದ್ದರು. ಅಗ್ನಿಶಾಮಕ ದಳದ ತೀವ್ರ ಹುಡುಕಾಟದ ಕೆಲವೇ ಗಂಟೆಗಳಲ್ಲಿ ಅಶೋಕ್ ಅವರ ಶವ ನದಿಯಲ್ಲಿ ಪತ್ತೆಯಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಮೃತಪಟ್ಟ ಅಶೋಕ್ ಉದ್ಯಾವರ ನಿವಾಸಿಯಾಗಿದ್ದು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.