Karavali
ಕಾರ್ಕಳ: ಬತ್ತಿದ ಸ್ವರ್ಣ - ಆಸರೆಯಾದ 'ರಾಮ' ಸಮುದ್ರ
- Thu, Apr 25 2019 02:00:22 PM
-
ವರದಿ: ಆರ್.ಬಿ.ಜಗದೀಶ್
ಕಾರ್ಕಳ,ಏ 25(Daijiworld News/MSP): ಪಶ್ಚಿಮಘಟ್ಟ ತಪ್ಪಲು ತೀರಾ ಪ್ರದೇಶವಾಗಿರುವ ಮಾಳ ಮಲ್ಲಾರು ಎಂಬಲ್ಲಿ ಉಗಮಿಸಿದ ಸ್ವರ್ಣ ನದಿಯ ಒಳ ಹರಿವು ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಕಾರ್ಕಳ ನಗರ ವ್ಯಾಪ್ತಿಗೆ ನೀರು ಸರಬರಾಜು ಮಾಡಲಾಗುತ್ತಿರುವ ದುರ್ಗ ಗ್ರಾಮದ ಬಲ್ಮಗುಂಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೀರು ಸರಬರಾಜು ಘಟಕಕ್ಕೆ ಬೀಗ ಜಡಿಯಲಾಗಿದೆ.
ಮಾಳದಿಂದ ಬಲ್ಮಗುಂಡಿಯವರೆಗೆ ಸ್ವರ್ಣ ನದಿಯಲ್ಲಿ ನೀರಿನ ಪ್ರಮಾಣಕ್ಕಿಂತ ಮರಳು ಪ್ರಮಾಣವೇ ಹೆಚ್ಚಾಗಿದೆ. ಬತ್ತಿಹೋದ ನದಿಯಲ್ಲಿ ಎಲ್ಲೆಲ್ಲೂ ಮರಳಿನ ಗುಂಪೆಗಳೇ ಕಾಣಸಿಗುತ್ತಿದೆ. ಮರಳು ತೆಗೆಯದೇ ಹೋದಲ್ಲಿ ಮಂದಿನ ವರ್ಷಗಳಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಸ್ವರ್ಣ ನದಿಯಲ್ಲಿ ನೀರನ ಒಳ ಹರಿವು ಇನ್ನಷ್ಟು ಕಡಿಮೆಯಾಗಲಿದೆ.
ಹಳೆಗಂಡನ ಪಾದವೇ ಗತಿ!
ಸ್ವರ್ಣ ನದಿ ಒಳವು ಹರಿವು ಹೋಗಿರುವುದರಿಂದ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಕಾರ್ಕಳ ಪುರಸಭಾ ಆಡಳಿತ ವರ್ಗಕ್ಕೆ ಕಷ್ಟಕರವಾಗಿದೆ. ಪರಿಣಾಮವಾಗಿ ಹಳೆ ಗಂಡನ ಪಾದವೇ ಗತಿ ಎಂಬಂತೆ ಐತಿಹಾಸಿಕ ಹಿನ್ನಲೆಯುಳ್ಳ ರಾಮಸಮುದ್ರ ನಾಮಾಂಕಿತದ ಬೃಹತ್ ಕೆರೆಯ ನೀರನ್ನು ಶುದ್ಧೀಕರಿಸಿ ಕಾರ್ಕಳ ನಾಗರಿಕರಿಗೆ ನೀಡುತ್ತಿರುವುದು ಲೋಕಸತ್ಯ.
ಮುಖ್ಯಮಂತ್ರಿಯ ಕೊಡುಗೆ
ಕಾರ್ಕಳ ವಿಧಾನ ಸಭಾ ಕ್ಷೇತ್ರ ಮೂಲಕ ರಾಜ್ಯದ ಮುಖ್ಯಂಂತ್ರಿ ಗದ್ದುಗೇರಿದ ಎಂ.ವೀರಪ್ಪ ಮೊಯಿಲಿಯವರು 1994ರಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ಲಿ ಬಲ್ಮಗುಂಡಿಯಲ್ಲಿ ಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಕೆಲ ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ತಲೆಎತ್ತಿದ್ದ ಜಲವಿದ್ಯುತ್ ಘಟಕದಿಂದಾಗಿ ಕಿರು ಅಣೆಕಟ್ಟಾಗಿ ಮಾರ್ಪಡು ಆಗಿದೆ. ಇಲ್ಲಿ ಸಂಗ್ರಹವಾಗುವ ನೀರನ್ನು ರಾಮಸಮುದ್ರ ಸಂಪಿಗೆ ಹಾಯಿಸಿ ಅಲ್ಲಿ ಶುದ್ಧೀಕರಿಸಿ ಕಾರ್ಕಳದ ವಿವಿದೆಡೆಗಳಿಗೆ ಕುಡಿಯುವ ಪೊರೈಕೆ ಮಾಡಲಾಗುತ್ತಿದೆ.
ಉಡುಪಿಗೂ ಅಸರೆಯಾಗಿದ್ದ ಸ್ವರ್ಣ
ಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ,ಕಲ್ಯಾಣಿ,ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆಯನ್ನು ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ನಾಮಾಂಕಿತದೊಂದಿಗೆ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತದೆ.
ಈ ನಡುವೆ ತೆಳ್ಳಾರಿನ ಮುಂಡ್ಲಿ ಯಲ್ಲಿ ಕಿರುಅಣೆಕಟ್ಟು ನಿರ್ಮಿಸಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಹಾಗೂ ಹಿರಿಯಡ್ಕ ಬಜೆಯಲ್ಲಿ ನಿರ್ಮಿಸಿರುವ ಅಣೆಕಟ್ಟು ನಲ್ಲಿ ಸಂಗ್ರಹವಾಗಿರುವ ನೀರನ್ನು ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಸಮಗ್ರವಾಗಿ ಪೊರೈಕೆ ಮಾಡಲಾಗುತ್ತಿದೆ.
ಕೃಷಿಕರಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿ
ಅರಣ್ಯ ಪ್ರದೇಶವಾಗಿ ಹರಿದು ಬರುವ ಸ್ವರ್ಣ ನದಿ ಕೆಲ ಕಡೆಗಳಲ್ಲಿ ಪ್ರಮೂಖ ರಸ್ತೆಯ ಅಂಚಿನಲ್ಲಿ ಹಾದು ಹೋಗುತ್ತದೆ. ಮಳೆಗಾಲ ಹೊರತು ಪಡಿಸಿ ಉಳಿದ ದಿನಗಳಲ್ಲಿ ನದಿ ಬರಡಾಗಿರುತ್ತದೆ. ನೀರು ನಿಲ್ಲುವ ಪ್ರದೇಶಗಳಾದ ಮಾಳ ಕಡಾರಿಯಲ್ಲಿ ಕಿಂಡಿಅಣೆಕಟ್ಟು , ದುರ್ಗದ ಮುಂಡ್ಲಿಯಲ್ಲಿಹಾಗೂ ಹಿರಿಯಡ್ಕ ಬಜೆಯಲ್ಲಿ ಅಣೆಕಟ್ಟು ನಿರ್ಮಿಸಿ ಅದರಲ್ಲಿ ಸಂಗ್ರಹವಾಗುವ ನೀರನ್ನು ಕುಡಿಯುಲು ಉಪಯೋಗಿಸಲಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ರೈತರು ಪಂಪ್ ಉಪಯೋಗಿಸಿಕೊಂಡು ನೀರನ್ನು ಕೃಷಿಕಾಯಕಗಳಿಗೆ ಬಳಸುತ್ತಿದ್ದಾರೆ. ಕಡುಬೇಸಿಗೆ ಎದುರಾಗಿದ್ದ ದಿನಗಳಲ್ಲಿ ಸ್ವರ್ಣ ನದಿಯ ಕೆಲ ಭಾಗಗಳಲ್ಲಿ ಹೊಂಡ ತೋಡಿ ಅದರ ಮೂಲಕ ಕೃಷಿಕರು ತಮ್ಮ ತೋಟಗಳಿಗೆ ನೀರನ್ನು ಬಳಸುತ್ತಿದ್ದಾರೆ.
ಬೃಹತ್ ಗಾತ್ರದ ಬಾವಿ ನಿರ್ಮಾಣದ ಯೋಜನೆ ಅಗತ್ಯ!
ಮುಂಡ್ಲಿ-ಬಲ್ಮಗುಂಡಿ ಪರಿಸರದಲ್ಲಿ ಬೃಹತ್ ಬಾವಿ ನಿರ್ಮಿಸುವುದರಿಂದ ಕಾರ್ಕಳ ಪುರಸಭಾ ವ್ಯಾಪ್ತಿಗೆ ಇನ್ನಷ್ಟು ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಿದೆ.
ಕೇರಳ ರಾಜ್ಯದಲ್ಲಿ ಹರಿಯುವ ಹೊಳೆ, ನದಿಯ ಪಕ್ಕದಲ್ಲಿ ಬೃಹತ್ ಬಾವಿಗಳು ನಿರ್ಮಿಸಿ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಯನ್ನು ಮಾದರಿಯನ್ನಾಗಿಟ್ಟುಕೊಂಡು ಸಾಣೂರು ಗ್ರಾಮ ಪಂಚಾಯತ್ ಶಾಂಭವಿ ಹೊಳೆಯ ತಟದಲ್ಲಿ ಬೃಹತ್ ಬಾವಿ ನಿರ್ಮಿಸಿ ಯಶಸ್ಸು ಕಂಡಿದೆ.
ಹೊಳೆಕ್ಕಿಂತ ಎತ್ತರಿಸಿ ಬಾವಿಯ ಹೊರಾಂಗಣ ನಿರ್ಮಿಸುವುದರಿಂದ ಮಳೆಗಾಲದಲ್ಲಿ ಉಂಟಾಗುವ ನೆರೆಯಿಂದ ಮುಕ್ತಗೊಳ್ಳಲು ಸಾಧ್ಯವಿದೆ.ಜಲಸಂಪನ್ಮೂಲವಾಗಿರುವ ರಾಮ ಸಮುದ್ರಕೆಸರುಮಯ
1994ರ ಮುನ್ನ ಮುಂಡ್ಲಿ ಡ್ಯಾಂ ನಿರ್ಮಾಣ ಕಾಮಗಾರಿ ಪೂರ್ತಿಗೊಳ್ಳುವ ತನಕ ಕಾರ್ಕಳ ನಗರ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರನ್ನು ರಾಮಸಮುದ್ರದಿಂದ ಪೊರೈಕೆಯಾಗುತ್ತಿತ್ತು.
ಕ್ರಿ.ಶ 1390ರಿಂದ 1420ರ ತನಕ ಕಾರ್ಕಳವನ್ನಾಳಿದ ವೀರಬೈರರಸನಿಗೆ ಇಬ್ಬರು ಮಕ್ಕಳು. ಮೊದಲನೆಯಾತ ವೀರಪಾಂಡ್ಯ. ನಂತರದವನು ರಾಮನಾಥ. ಸ್ವಾತಿಕ ಸ್ವಭಾವದ ರಾಮನಾಥ ತನ್ನ ತಂದೆಯ ಜೀವಿತಾವಧಿಯಲ್ಲಿಯೇ ವಿಧಿವಶನಾಗಿದ್ದನು. ಆತನ ಸ್ಮರಣಾರ್ಥವಾಗಿ ರಮಣೀಯ ಪರಿಸರದಲ್ಲಿ ನಿರ್ಮಿಸಲಾಗಿರುವುದೇ ರಾಮಸಮುದ್ರ.
ಗೋಮಟ್ಟಬೆಟ್ಟಕ್ಕೆ ಮತ್ತೊಂದು ಪಾರ್ಶ್ವದಲ್ಲಿ ಕಾಣಸಿಗುವಂತಹ ಈ ರಾಮ ಸಮುದ್ರದಲ್ಲಿ ಮಳೆಗಾಲದ ವೇಳೆಗೆ ಸಂಗ್ರಹವಾಗುವ ಮಳೆನೀರು ಯಾವುದೇ ಋತುವಿನಲ್ಲಿಯೂ ಬತ್ತಿಹೋಗದೇ ಇರುವುದರಿಂದ ಪುರಸಭೆಗೆ ವರದಾನವಾಗಿದೆ. ಗಮನಾರ್ಹವೆಂದರೆ ಮುಂಡ್ಲಿಯಲ್ಲಿ ನೀರು ಬತ್ತಿ ಹೋದ ಹಾಗೂ ಅನಿವಾರ್ಯ ದಿನಗಳಲ್ಲಿ ಇದೇ ರಾಮ ಸಮುದ್ರ ಕೆರೆಯ ನೀರನ್ನು ಶುದ್ಧೀಕರಣಗೊಳಿಸಿ ಕುಡಿಯುವ ನೀರನ್ನಾಗಿ ಪೊರೈಕೆ ಮಾಡಲಾಗುತ್ತಿತ್ತು.
ರಾಮಸಮುದ್ರ ಕೆರೆಯ ಆಳ ದಿನದಿಂದ ದಿನಕ್ಕೆ ಕುಗ್ಗತೊಡಗಿದೆ. ಕೆರೆಯಲ್ಲಿ ಹೆಚ್ಚುತ್ತಿರುವ ಹೂಳು ಅದಕ್ಕೆ ಕಾರಣವು ಆಗಿದೆ.
ಮಿಯ್ಯಾರು ಗ್ರಾಮ ಪಂಚಾಯತ್ -ಕಾರ್ಕಳ ಪುರಸಭೆಯ ಗಡಿಭಾಗದಲ್ಲಿ ಇರುವ ರಾಮಸಮುದ್ರ ಕೆರೆಯ ಹೂಳೆತ್ತುವ ಕಾಮಗಾರಿ ನಡೆದಲ್ಲಿ ಪರಿಸರದ ಇತರ ಇನ್ನೂ ಕೆಲ ಗ್ರಾಮಗಳಿಗೆ ಇದೇ ಕೆರೆಯ ನೀರನ್ನು ಸದುಯೋಗ ಪಡಿಸಲು ಅನುಕೂಲವಾಗಲಿದೆ.