ಮಂಗಳೂರು, ಏ 25(Daijiworld News/MSP): ಪಣಂಬೂರು ಆಸುಪಾಸಿನ ಬೈಕಂಪಾಡಿ, ಹೊಸಬೆಟ್ಟು, ಗುಡ್ಡೆಕೊಪ್ಲ, ಸಸಿಹಿತ್ಲು ಬಳಿಯ ಸಮುದ್ರ ತೀರದಲ್ಲಿ ಏಪ್ರಿಲ್ 22 ರಿಂದ ಡಾಂಬರಿನ ಉಂಡೆಗಳನ್ನು ಕಂಡು ಆತಂಕಗೊಂಡಿರುವ ಇಲ್ಲಿನ ಸ್ಥಳೀಯರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಅವರಿಗೆ ಮನವಿ ನೀಡಿದ್ದಾರೆ.
ಸಮುದ್ರದಲ್ಲಿ ಯಾವುದೋ ತೈಲ ಸಾಗಾಟ ಹಡಗು, ನಿಯಮ ಉಲ್ಲಂಘಿಸಿ ಶುದ್ದಗೊಳಿಸಿರುವುದು ಅಥವಾ ಉದ್ಯಮಗಳ ತ್ಯಾಜ್ಯ ನೀರು ವಿಸರ್ಜನೆಯಾದ ಪರಿಣಾಮದಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗಿರುವ ಸಾಧ್ಯತೆ ಇದೆ ಎಂದು ಬೈಕಂಪಾಡಿಯ ಮೀನುಗಾರರು ಆರೋಪಿಸಿದ್ದಾರೆ. ಡಾಂಬರು ವಾಸನೆ ಹಾಗೂ ತೈಲದ ಅಂಶವೂ ಹೊಂದಿರುವ ಕಾರಣ ಮೀನುಗಾರಿಕೆ ನಡೆಸಲು ಮೀನುಗಾರರಿಗೆ ತೀವ್ರ ಸಮಸ್ಯೆಯಾಗಿದೆ. ಮೀನು ಕೊರತೆಯಿಂದ ಮೀನುಗಾರರು ಕಂಗಾಲಾಗಿದ್ದು, ಮಾಲಿನ್ಯ ತಡೆಗೆ ಪ್ರತಿಭಟನೆ ಸಿದ್ಧತೆ ನಡೆಸಲಾಗಿದೆ.
ಏಪ್ರಿಲ್ ೨೨ರಿಂದ ಕಡಲಿಗೆ ಸೇರುತ್ತಿರುವ ಡಾಂಬರು ತ್ಯಾಜ್ಯದ ಬಗ್ಗೆ ಕೋಸ್ಟ್ಗಾರ್ಡ್, ಕರಾವಳಿ ನಿಯಂತ್ರಣ ಪಡೆ, ಎನ್ಎಂಪಿಟಿಗೆ ಸ್ಪಷ್ಟ ನಿರ್ದೇಶನ ನೀಡಿ ಕ್ರಮಕೈಗೊಳ್ಳುವಂತೆ ಪಣಂಬೂರು ಬೀಚ್ ಡೆವಲಪ್ಮೆಂಟ್ ಪ್ರೊಜೆಕ್ಟ್ನ ಸಿಇಒ ಆಗಿರುವ ಯತೀಶ್ ಬೈಕಂಪಾಡಿ ಡೀಸಿಗೆ ಮನವಿ ನೀಡಿದ್ದಾರೆ.