ಮಂಗಳೂರು, ನ 17: ನಗರದಿಂದ 30 ಕಿಲೋಮೀಟರ್ ದೂರದಲ್ಲಿರುವ ಕಿರೆಂ ರೆಮದಿ ಚರ್ಚ್ ನವೀಕರಣಗೊಂಡಿದ್ದು, ನವೆಂಬರ್ 19 ರಂದು ಲೋಕಾರ್ಪಣೆಗೊಳ್ಳಲಿದೆ.
ಮುಲ್ಕಿಯ ಕಿನ್ನಗೋಳಿ ಸಮೀಪದ ದಾಮಸ್ ಕಟ್ಟೆ ಎಂಬಲ್ಲಿ ಭವ್ಯವಾಗಿ ಶೋಭಿಸುವ ಕಿರೆಂ ರೆಮದಿ ಅಮ್ಮನವರ ಚರ್ಚ್ ಗೆ ಸುಮಾರು 300 ವರ್ಷಗಳ ಸುದೀರ್ಘ ಇತಿಹಾಸವಿದೆ. ಇದೀಗ ಈ ಚರ್ಚ್ ಸುಮಾರು 1.25 ಕೋಟಿ ರೂ ವೆಚ್ಚದಲ್ಲಿ ನವೀಕರಣಗೊಂಡಿದ್ದು, ನವೆಂಬರ್ 19 ರಂದು ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮ ಪ್ರಾಂಥ್ಯದ ಬಿಷಪ್ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಕಿರೆಂ ರೆಮದಿ ಅಮ್ಮನವರ ಚರ್ಚ್ ಪ್ರಧಾನ ಧರ್ಮಗುರು ರೆ. ಫಾ. ವಿಕ್ಟರ್ ಡಿಮೆಲ್ಲೊ ಹೇಳಿದ್ದಾರೆ.
ಕಿರೆಂ ಚರ್ಚ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ಸರಕಾರದಿಂದ 50 ಲಕ್ಷ ಅನುದಾನ ದೊರೆತಿದ್ದು, ಊರ ಪರವೂರ ಭಕ್ತಭಿಮಾನಿಗಳ ಸಹಕಾರದಿಂದ ಸುಸಜ್ಜಿತ ಚರ್ಚ್ ನಿರ್ಮಿಸಲಾಗಿದೆ. ದೇವಾಲಯದ ಮೇಲ್ಚಾವಣಿ, ನವೀಕೃತ ಬಲಿಪೀಠ, ಸುಂದರ ಗೋಪುರವನ್ನು ಅದ್ಭುತವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.