ಮಂಗಳೂರು, ಏ 26 (Daijiworld News/MSP): ಮೋದಿಯವರಿಗೆ ಉಡುಗೊರೆಯಾಗಿ ಸಿಕ್ಕಿದ ಪೇಟಿಂಗ್, ಫೋಟೊ, ಟರ್ಬನ್ (ಪೇಟಗಳು), ಶಾಲುಗಳು, ಶಿಲ್ಪಗಳು ಸೇರಿದಂತೆ 1,800 ವಸ್ತುಗಳು ಇ-ಸೇಲ್ ಮೂಲಕ ಹರಾಜು ಹಾಕಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಉಡುಗೊರೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಿ ಬಂದ ಹಣವನ್ನು ಗಂಗಾ ನದಿ ಸ್ವಚ್ಚಗೊಳಿಸುವ ಕೇಂದ್ರ ಸರಕಾರದ ನವಾಮಿ ಗಂಗೆ ಯೋಜನೆಗೆ ಬಳಸುವ ಬಗ್ಗೆ ಕೇಂದ್ರ ಸಾಂಸ್ಕೃತಿಕ ಸಚಿವ ಮಹೇಶ್ ಶರ್ಮಾ ಮುಂಚಿತವಾಗಿಯೇ ತಿಳಿಸಿದ್ದರು.
ಈ ಹಿನ್ನಲೆಯಲ್ಲಿ ಕಳೆದ ಜವರಿಯಲ್ಲಿ ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ದೇಶದ ವಿವಿಧ ಸಂಸ್ಥೆಗಳು, ವ್ಯಕ್ತಿಗಳು ಮೋದಿಗೆ ನೀಡಿದ ಉಡುಗೊರೆಗಳನ್ನು ಇ- ಹರಾಜಿಗೆ ಇಡಲಾಗಿತ್ತು. ಈ ಪೈಕಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ದೊರೆತ ಎರಡು ಪೇಟಾ ಹಾಗೂ ಎರಡು ಶಾಲುಗಳು ಹರಾಜು ಪ್ರಕ್ರಿಯೆಯ ಮೂಲಕ ಮಂಗಳೂರಿಗರ ಕೈ ಸೇರಿದೆ.
ಮಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಕೊಡಿಯಾಲ್ ಬೈಲ್ನ ದೀಪಾ ಶೆಣೈ ಹಾಗೂ ಮಮತಾ ಶೆಣೈ ಪ್ರಧಾನಿ ಅವರ ಪೇಟಾ ಮತ್ತು ಶಾಲುಗಳನ್ನು ಕೊಂಡುಕೊಂಡಿದ್ದಾರೆ. ಇ- ಹರಾಜು ಬಗ್ಗೆ ಸುದ್ದಿಯನ್ನು ಗಮನಿಸಿ ಈ ಇಬ್ಬರು ಮಹಿಳೆಯರು ಕೂಡಾ ಬಿಡ್ ನಲ್ಲಿ ಭಾಗಿಯಾಗಿ ಪೇಟಾ ಹಾಗೂ ಬಾಂದನಿ ಶಾಲುಗಳನ್ನು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೋದಿ ಅವರಿಗೆ ಸಿಕ್ಕ ಗಿಪ್ಟ್ಗಳನ್ನು ಇ - ಸೇಲ್ ಮಾಡಿ ಬಂದ ಹಣವನ್ನು ಗಂಗಾ ನದಿ ಸ್ವಚ್ಚತೆಗೆ ಬಳಸುವ ಸದುದ್ದೇಶಕ್ಕೆ ಮಾರು ಹೋದ ಅವರು, ತಮ್ಮ ಸಹೋದ್ಯೋಗಿ ದೀಪಾ ಅವರಲ್ಲೂ ಹಂಚಿಕೊಂಡು ಇಬ್ಬರೂ ಬಿಡ್ ನಲ್ಲಿ ಭಾಗವಹಿಸಿದರು. ಆದರೆ ಅಲ್ಲಿದ್ದ ವಸ್ತುಗಳ ಬೆಲೆ ಎಲ್ಲವೂ ಸಾವಿರಾರು ರೂಪಾಯಿ ದಾಟಿ ಲಕ್ಷಕ್ಕೆ ತಲುಪಿತ್ತು. ಕೊನೆಗೆ ಇವರ ಕಣ್ಣಿಗೆ ಬಿದ್ದದ್ದು ಪೇಟಾ ಹಾಗೂ ಬಾಂದಿನಿ ಶಾಲು. ದೀಪಾ ಅವರು ಆಯ್ದುಕೊಂಡ ಪೇಟಾದ ಮೂಲ ಬೆಲೆ 800 ರೂ. ಇತ್ತು. ಆದರೆ ಬಿಡ್ಡಿಂಗ್ ಬಳಿಕ ಅದರ ಬೆಲೆ 1600 ಕ್ಕೆ ಏರಿತು. ತಕ್ಷಣ ಅದನ್ನು ಖರೀದಿಸಿದರು. 200 ರೂ. ಕೊರಿಯರ್ ಚಾರ್ಜ್, 94 ರೂ. ವಿಮೆ ಹೀಗೆ ಎಲ್ಲವೂ ಸೇರಿ ಒಟ್ಟು 1894 ರೂ. ಗೆ ಪೇಟಾ ಸಿಕ್ಕಿದೆ.
ಇನ್ನು ಮಮತಾ ಅವರು ಎರಡು ಬಾಂದಿನಿ ಶಾಲು ಹಾಗೂ ಒಂದು ಪೇಟಾವನ್ನು ಸುಮಾರು 7,000 ರೂಪಾಯಿ ನೀಡಿ ಖರೀದಿಸಿದ್ದಾರೆ. ಇದರೊಂದಿಗೆ ಶುಭಾಶಯ ಕೋರುವ ಸರ್ಟಿಫಿಕೇಟ್ ಕೂಡಾ ನೀಡಲಾಗಿದೆ.