ಲಖ್ನೋ: ಭಾನುವಾರ 17ನೇ ತಾರೀಕಿನಂದು ಪ್ರಧಾನಿ ಮೋದಿಯವರ ಹುಟ್ಟಿದ ಹಬ್ಬವಿರುವ ಹಿನ್ನೆಲೆಯಲ್ಲಿ ಆ ದಿನ ಶಾಲಾ ರಜೆಯನ್ನು ರದ್ದುಗೊಳಿಸಿರುವ ಉತ್ತರ ಪ್ರದೇಶ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ಯೋಗಿ ಸರಕಾರ ಭಾನುವಾರ ಸೆಪ್ಟಂಬರ್ 17ರಂದು ಮೋದಿ ಹುಟ್ಟಿಹಬ್ಬದ ಪ್ರಯುಕ್ತ ಮಕ್ಕಳು ಶಾಲೆಗಳಿಗೆ ಕಡ್ಡಾಯವಾಗಿ ಆಗಮಿಸಬೇಕು ಎಂಬ ಆದೇಶವನ್ನು ಹೊರಡಿಸಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಪ್ರಾಥಮಿಕ ಶಿಕ್ಷಣ ಸಚಿವೆ ಅನುಪಮಾ ಜೈಸ್ವಾಲ್ ಅಂದು ಶಾಲೆಗಳಲ್ಲಿ ಪಾಠಗಳು ಇರುವುದಿಲ್ಲ ಬದಲಿಗೆ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂಥಾ ಕಾರ್ಯಕ್ರಮಗಳು ನಡೆಯಲಿರುವುದು ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮದ ಉದ್ದೇಶ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.
ಸರಕಾರದ ಆದೇಶವನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷಗಳು ಉತ್ತರ ಪ್ರದೇಶ ಸರಕಾರ ಹುಟ್ಟುಹಬ್ಬದ ನೆಪದಲ್ಲಿ ನರೇಂದ್ರ ಮೋದಿಯ ಆರಾಧನೆಯಲ್ಲಿ ತೊಡಗಿದೆ ಎಂದು ಟೀಕಿಸಿವೆ.
ವಿದ್ಯಾರ್ಥಿಗಳ ಹೆತ್ತವರು ಕೂಡಾ ಭಾನುವಾರದಂದು ಮಕ್ಕಳ ರಜೆಯನ್ನು ರದ್ದು ಮಾಡಿರುವುದು ಸರಿಯಲ್ಲ ಬದಲಿಗೆ ಬೇರೆ ದಿನ ಇಂಥಾ ಕಾರ್ಯಕ್ರಮಗಳನ್ನು ಆಯೋಜಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.