ಉಡುಪಿ,ಏ 26 (Daijiworld News/MSP): ಜಗತ್ತನ್ನು ಭಯೋತ್ಪಾದನೆ, ಹಿಂಸೆ, ದ್ವೇಷ ಹಾಗೂ ಕ್ರೂರ ಕೃತ್ಯಗಳಿಂದ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಈ ಎಲ್ಲದರ ಬದಲಾಗಿ ಶಾಂತಿ, ಪ್ರೀತಿ, ಅಹಿಂಸೆ ಹಾಗೂ ಕ್ಷಮೆ ಮೂಲಕ ಜಗತ್ತನ್ನು, ಮಾನವ ಕುಲವನ್ನು ಗೆಲ್ಲಲು ಸಾಧ್ಯವಿದೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಅವರು ಹೇಳಿದರು.
ಅವರು ಗುರುವಾರ ಸಂಜೆ ನಗರದ ಶೋಕಮಾತ ಇಗರ್ಜಿಯಲ್ಲಿ ಶ್ರೀಲಂಕಾ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದರು. ಎಂದಿಗೂ ಭಯೋತ್ಪಾದನೆ, ಹಿಂಸೆ, ಕ್ರೌರ್ಯಗಳಿಂದ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲ. ಬದುಕು ಕಟ್ಟಲು ಎಷ್ಟು ಕಷ್ಟ ಎಂಬ ಸಂಗತಿಯನ್ನು ಬದುಕು ನಾಶಮಾಡಲು ಹೊರಟವರು ಅರ್ಥ ಮಾಡಿಕೊಂಡಿದ್ದರೆ ಇಂತಹ ನೀಚ ಕೃತ್ಯಗಳು ಸಂಭವಿಸುತ್ತಿರಲಿಲ್ಲ. ಮೃತರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬಿಷಪ್ ಪ್ರಾರ್ಥಿಸಿದರು.
ಜಗತ್ತಿನಾದ್ಯಂತ ಹಬ್ಬದ ದಿನವೇ ಶ್ರೀಲಂಕಾದ ಜನರಿಗೆ ಕರಾಳ ದಿನವಾಯಿತು. ಈ ದುರ್ಘಟನೆಯಲ್ಲಿ 10 ಭಾರತೀಯರ ಸಹಿತ 259 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಶ್ರೀಲಂಕಾದಲ್ಲಿ ಉಗ್ರರ ಕೃತ್ಯಕ್ಕೆ 45ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ತಮ್ಮದಲ್ಲದ ತಪ್ಪಿಗೆ ಬಲಿಯಾಗಿದ್ದಾರೆ ಎಂದು ಖೇದ ವ್ಯಕ್ತ ಪಡಿಸಿದರು, ಈ ಕ್ರೂರ ಕೃತ್ಯವನ್ನು ಇಡೀ ಜಗತ್ತು ಖಂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಗುರುಗಳಾದ ವಂದನೀಯ ಬ್ಯಾಪ್ಟಿಸ್ಟ್ ಮೆನೇಜಸ್, ಸಿಎಸ್ಐನ ರೆ. ಸ್ಟಿವನ್ ಸರ್ವೋತ್ತಮ, ನೋಯೆಲ್ ಕರ್ಕಡ, ಉಡುಪಿ ಧರ್ಮ ಪ್ರಾಂತ್ಯದ ಧರ್ಮಗುರುಗಳಾದ ವಿಲಿಯಂ ಮಾರ್ಟಿಸ್, ಲಾರೆನ್ಸ್ ಡಿಸೋಜ, ಫರ್ಡಿನಾಂಡ್ ಗೊನ್ಸಾಲ್ವಿಸ್, ಸ್ಟೀವನ್ ಡಿಸೋಜ ಡಿಸೋಜ, ವಿನ್ಸೆಂಟ್ ಕುವೆಲ್ಲೊ, ಫ್ರಾನ್ಸಿಸ್ ಕರ್ನೆಲಿಯೋ, ಚಾರ್ಲ್ಸ್ ಸಾಲ್ಡಾನ ವಿಜಯ್ ಡಿಸೋಜ, ಜೆರಾಲ್ಡ್ ಸಂದೀಪ್ ಡಿಮೆಲ್ಲೋ, ಆಲ್ಫೋನ್ಸ್ ಡಿಲೀಮಾ, ರೋಯ್ಸನ್ ಫೆರ್ನಾಂಡಿಸ್, ಉಡುಪಿ ಧರ್ಮ ಪ್ರಾಂತ್ಯದ ಐ ಸಿ ವೈ ಎಂ ಸಂಘಟನೆಯ ಅಧ್ಯಕ್ಷ ಡಿಯೋನ್ ಡಿಸೋಜ, ಮಹಿಳಾ ಸಂಘಟನೆಯ ಜಾನೆಟ್ ಬರ್ಬೋಜ, ಕ್ಯಾಥೋಲಿಕ್ ಸಭಾದ ಆಲ್ವಿನ್ ಕ್ವಾಡ್ರಸ್, ಉಡುಪಿ ಜಿಲ್ಲಾ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸಿನ್ ಮಲ್ಪೆ ಉಪಸ್ಥಿತರಿದ್ದರು.
ಐಸಿವೈಎಂ ಸಂಘಟನೆಯ ಅಧ್ಯಕ್ಷ ಡಿಯೋನ್ ಡಿಸೋಜ ಸ್ವಾಗತಿಸಿದರು. ಧರ್ಮಪ್ರಾಂತದ ಪಾಲನಾ ಪರಿಷತ್ ಕಾರ್ಯದರ್ಶಿ ಆಲ್ಫೋನ್ಸ್ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಇದೇ ವೇಳೆ ವಿವಿಧ ಸಭೆಗಳ ಧರ್ಮಗುರುಗಳು ಹಾಗು ಕ್ರೈಸ್ತ ಬಾಂಧವರು ನೆರೆದಿದ್ದವರೆಲ್ಲರೂ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು.