ಮಂಗಳೂರು,ಏ 26 (Daijiworld News/MSP): ನಗರದ ನೆಹರು ಮೈದಾನದಲ್ಲಿ ಏ.26 ರ ಶುಕ್ರವಾರ ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, 2018-19 ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ಪತ್ತೆಯಾದ 3 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ ಸೊತ್ತು ಮಾಲೀಕರುಗಳಿಗೆ ಪ್ರಾಪರ್ಟಿ ರಿಟರ್ನ್ ಪರೇಡ್ನಲ್ಲಿ ಹಿಂತಿರುಗಿಸಿದರು.
ಬಳಿಕ ಮಾತನಾಡಿದ ಸಂದೀಪ್ ಪಾಟೀಲ್ ಅವರು 2018 ನೇ ಸಾಲಿನಲ್ಲಿ ಒಟ್ಟು, 4 ಕೋಟಿಯ 30 ಲಕ್ಷದ ಮೌಲ್ಯದ ಸೊತ್ತು ಕಳವಾಗಿದ್ದು, ಅದರಲ್ಲಿ ಒಟ್ಟು 3 ಕೋಟಿ 40 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಹಾಗೂ 2019ನೇ ಸಾಲಿನಲ್ಲಿ ಒಟ್ಟು 65 ಲಕ್ಷದ ಸೊತ್ತುಗಳು ಕಳವಾಗಿದ್ದು ಅದರಲ್ಲಿ 32 ಲಕ್ಷ ಮೌಲ್ಯದ ಸೊತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗುವುದು ಎಂದರು. ಇದೇ ವೇಳೆ ಕಳ್ಳತನ ಪ್ರಕರಣಗಳನ್ನು ಬೇದಿಸಿದ ಪೊಲೀಸರಿಗೆ ಪ್ರಶಂಸೆ ಪತ್ರಗಳನ್ನು ನೀಡಿ ಗೌರವಿಸಿದರು.
ಉರ್ವ, ಉಳ್ಳಾಲ, ಕೊಣಾಜೆ ಕಂಕನಾಡಿ ನಗರ/ ಗ್ರಾಮಾಂತರ , ಕಾವೂರು, ಬಜ್ಪೆ, ಮೂಡುಬಿದಿರೆ ಹೀಗೆ ವಿವಿಧ ಠಾಣೆಯಲ್ಲಿ ಜಪ್ತಿ ಮಾಡಲಾದ ವಸ್ತುಗಳನ್ನು ವಾರೀಸುದಾರರಿಗೆ ಹಿಂತಿರುಗಿಸಲಾಯಿತು.