ಕಾರ್ಕಳ,ಏ 26 (Daijiworld News/MSP): ತಾಲೂಕಿನ ಜನರ ಮರಳು ಸಮಸ್ಯೆ ಬಗ್ಗೆ ಕೂಡಲೇ ಪರಿಹಾರ ಕಂಡುಕೊಳ್ಳುವಲ್ಲಿ ಕಾರ್ಕಳ ಕ್ಷೇತ್ರದ ಶಾಸಕ ವಿ ಸುನಿಲ್ ಕುಮಾರ್ ರವರು ರಾಜ್ಯ ಸರ್ಕಾರದ ಗಣಿ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಕಾರ್ಯದರ್ಶಿ ಮಹೇಶ್ವರ್ ರಾವ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಪತ್ರ ಮುಖೇನ ಮನವಿ ಮಾಡಿದ್ದಾರೆ.
ತಾಲೂಕಿನಾದ್ಯಂತ ಮರಳು ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಹಲವು ತಿಂಗಳಿಂದ ತಾಲೂಕಿನಲ್ಲಿ ಸಾವಿರಾರು ಕಟ್ಟಡ ಕಾರ್ಮಿಕರು, ಪೈಂಟರ್ಸ್ಸ್ , ಇಲೆಕ್ಟ್ರೀಶನ್ಗಳು, ಮರದ ಕೆಲಸಗಾರರು ಉದ್ಯೋಗವಿಲ್ಲದೆ, ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.
ಈಗಾಗಲೇ ಹಲವು ದೇವಸ್ಥಾನಗಳ ನಿರ್ಮಾಣ ಕಾಮಗಾರಿ , ಪೊಲೀಸ್ ಇಲಾಖೆಯ ವಸತಿ ಕಟ್ಟಡ ಕಾಮಗಾರಿ ಮರಳು ಸಮಸ್ಯೆಯಿಂದ ಅರ್ದದಲ್ಲೆ ನಿಂತಿರುತ್ತದೆ. ಈ ಹಿಂದೆ ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ರವರು ಮರಳು ಸಮಸ್ಯೆಯ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ವಿವಿಧ ಹಿರಿಯ ಅಧಿಕಾರಿಗಳೊಂದಿಗೆ ಹಲವಾರು ಭಾರಿ ಸಭೆ ನಡೆಸಿ, ವಿಧಾನಸಭೆಯಲ್ಲಿ ಕೂಡ ಕ್ಷೇತ್ರದ ಜನತೆಗೆ ಮರಳಿನಿಂದ ಆಗುವ ತೊಂದರೆ ಬಗ್ಗೆ ಧ್ವನಿ ಎತ್ತಿದರು. ಆದರೂ ಕೂಡ ಈ ಬಗ್ಗೆ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಸ್ಪಂದಿಸಲಿಲ್ಲ.
ಸ್ಪಂದಿಸಿದ ಅವರು ಮುಂದಿನ ಕೆಲವೇ ದಿನಗಳಲ್ಲಿ ಮರಳು ಪೂರೈಕೆಗೆ ಇರುವ ತೊಡಕುಗಳನ್ನು ಪರಿಹರಿಸಿ ಕ್ಷೇತ್ರದ ಜನತೆಗೆ ಮರಳು ಪೂರೈಕೆ ಆಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ಸಂದರ್ಭದಲ್ಲಿ ಶಾಸಕರಿಗೆ ರಾಜ್ಯ ಸರ್ಕಾರದ ಗಣಿ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಕಾರ್ಯದರ್ಶಿ ಮಹೇಶ್ವರ್ ರಾವ್ ಆಶ್ವಾಸನೆ ನೀಡಿದ್ದಾರೆಂದು ಶಾಸಕರ ವಿಕಾಸ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.