ಉಡುಪಿ, ಏ 26 (Daijiworld News/SM): ಜಾರಕಿಹೋಳಿ ಸಹೋದರರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲು ಪಕ್ಷದ ಮುಖಂಡರು ಕಸರತ್ತು ನಡೆಸುತ್ತಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ. ಜಾರಕಿಹೋಳಿ ವಿಚಾರದಲ್ಲಿ ಬಿಜೆಪಿಯ ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಅವರ ಪಕ್ಷದಲ್ಲಿ ಇರುವ ತನಕ ನಮ್ಮದು ಯಾವುದೇ ರೀತಿಯ ಪಾತ್ರವಿಲ್ಲ ಎಂದಿದ್ದಾರೆ. ಪಕ್ಷಕ್ಕೆ ರಾಜಿನಾಮೆ ಕೊಟ್ಟಾಗ ಬಿಜೆಪಿ ಅವರನ್ನು ಮಾತಾಡಿಸುತ್ತದೆ. ಜಾರಕಿಹೋಳಿ ಮತ್ತು ಅವರ ಬೆಂಬಲಿಗರು ಸದ್ಯ ಕಾಂಗ್ರೆಸ್ ನಲ್ಲೇ ಇದ್ದಾರೆ. ಕಾಂಗ್ರೆಸ್ ಶಾಸಕರ ಬಗ್ಗೆ ಬಿಜೆಪಿ ಯಾವುದೇ ಮಾತುಗಳನ್ನು ಆಡುವುದಿಲ್ಲ. ಬಿಜೆಪಿಯ ನಿಲುವು ಬಹಳ ಸ್ಪಷ್ಟವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.