ಮಂಗಳೂರು,ಏ 27(Daijiworld News/MSP): ಬಂಗಾಳ ಕೊಲ್ಲಿಯ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಈ ನಡುವೆ ಕೇರಳದಿಂದ ಉತ್ತರ ಕರ್ನಾಟಕದ ಕಡೆಗೆ ಟ್ರಪ್ ಚಲಿಸಲಿರುವ ಹಿನ್ನಲೆಯಲ್ಲಿ ಏ.28ರಂದು ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಭಾರಿ ಮಳೆಯಾಗಲಿದೆ.
ಬಂಗಾಳಕೊಲ್ಲಿಯ ದಕ್ಷಿಣಭಾಗದಲ್ಲಿ ನಿಮ್ನ ಒತ್ತಡ ಪ್ರದೇಶ ಉಂಟಾಗಿದ್ದು, ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಈ ನಡುವೆ ಟ್ರಪ್ ಕೇರಳದಿಂದ ಉತ್ತರ ಕರ್ನಾಟಕದ ಕಡೆಗೆ ಸಾಗಲಿರುವುದರಿಂದ ಕರಾವಳಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮೋಡ ಆವರಿಸಲಿದೆ. ಜತೆಗೆ ಬಲವಾದ ಗಾಳಿಯೂ ಬೀಸಲಿದೆ.
ಕರಾವಳಿ ಮಳೆಗೆ ಟ್ರಪ್ ಕಾರಣವೇ ಹೊರತು ಚಂಡಮಾರುತವಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಎಸ್. ಎಂ ಗಾವಸ್ಕರ್ ತಿಳಿಸಿದ್ದಾರೆ. ಚಂಡಮಾರುತ ಹಿನ್ನಲೆಯಲ್ಲಿ ಏ.30 ರವರೆಗೆ ಮಳೆ ಮುಂದುವರಿಯಲಿದೆ.
ಕರಾವಳಿಯಲ್ಲಿ ಮಾತ್ರವಲ್ಲದೇ ಕೇರಳ ವಯನಾಡು, ಕೋಝಿಕೋಡ್ ಮಲಪ್ಪುರ, ಪಾಲ್ಫಾಟ್, ತ್ರಿಶ್ಯೂರ್ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರೋದ್ರಿರಿಂದ ಮುನ್ನೆಚ್ಚರಿಕೆಯಿಂದ ಇರುವಂತೆ ಜನತೆಗೆ ಹಾಗೂ ಮೀನುಗಾರರಿಗೆ ಸೂಚಿಸಲಾಗಿದೆ.