ಕುಂದಾಪುರ,ಏ 27(Daijiworld News/MSP): ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ಅತೀ ಅಪರೂಪವಾದ ವಕ್ಕೈ ಮಾಸ್ತಿ ಕಲ್ಲು ಪತ್ತೆಯಾಗಿದೆ.
ಮಾಸ್ತಿಕಲ್ಲುಗಳು ಕರಾವಳಿ ಭಾಗದಲ್ಲಿ ಪತ್ತೆಯಾಗುವುದು ಸಹಜವಾದರೂ ಕೂಡಾ ಇಲ್ಲಿ ಪತ್ತೆಯಾಗಿರುವುದು ವಕ್ಕೈ ಮಾಸ್ತಿಕಲ್ಲು ಆಗಿರುವುದು ವಿಶೇಷ. ಅತೀ ಅಪರೂಪಕ್ಕೆ ದೊರೆಯುವ ಮಾಸ್ತಿಕಲ್ಲು ಇದಾಗಿದ್ದು, ಸಹಜವಾಗಿಯೇ ಇತಿಹಾಸ ಆಸಕ್ತರ ಕುತೂಹಲ ಕೆರಳಿಸಿದೆ.
ಈ ಮಾಸ್ತಿಕಲ್ಲಿನಲ್ಲಿ ವೀರ ಹಾಗೂ ಸತಿ ಇದ್ದು ಎರಡನೇ ಪಟ್ಟಿಯಾಗಿ ಶಿವಲಿಂಗವಿದೆ. ಸೂರ್ಯ, ಚಂದ್ರ ಕೂಡಾ ಇದೆ. ಮೇಲ್ಬಾಗ ಗೋಪುರದಂತಿದೆ .ವೀರ ಹಾಗೂ ಸತಿ ಮರಣದ ನಂತರ ಶಿವನಲ್ಲಿ ಲೀನವಾದ ಸಂದೇಶವನ್ನು ನೀಡುವಂತ ವಕ್ಕೈ ಮಾಸ್ತಿ ಕಲ್ಲು ನೆನಪಿಗಾಗಿ ಗೋಪುರ ಕಟ್ಟಿರಬಹುದು. ಸೂರ್ಯ, ಚಂದ್ರ ಇರುವವರೆಗೂ ಈ ವೀರ, ಸತಿ ಅಜರಾಮರ ಎನ್ನುವ ಮಾಹಿತಿಯನ್ನು ಈ ವಕ್ಕೈ ಮಾಸ್ತಿ ಕಲ್ಲು ನೀಡುತ್ತದೆ.
ಈ ಮಾಸ್ತಿ ಕಲ್ಲನ್ನು ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹಚ್ಚಿದ್ದು ಇವರಿಗೆ ಶಂಕರನಾರಾಯಣ ಪ್ರವೀಣ್ ಸಹಕಾರ ನೀಡಿದ್ದಾರೆ.
ಹಿಂದೆ ಸಹಗಮನ ಪದ್ದತಿ ರೂಢಿಯಲ್ಲಿ ಇತ್ತು. ಪತಿ ಸತ್ತಾಗ ಪತ್ನಿಯೂ ಸಹಗಮನ ಮಾಡುತ್ತಿದ್ದಳು. ರಾಜರುಗಳು ಸತ್ತಾಗ ರಾಣಿ ಸಹಗಮನ ಮಾಡಿದ ಬಳಿಕ ಅವರು ಅಮರವಾಗಿಸುವ ನೆಲೆಯಲ್ಲಿ ಶಿಲೆಯನ್ನು ಕೆತ್ತುತ್ತಿದ್ದರಂತೆ. ಅದನ್ನು ಮಾಸ್ತಿಕಲ್ಲುಗಳೆಂದು ಕರೆಯಲಾಗುತ್ತದೆ. ಕರಾವಳಿ ಭಾಗದಲ್ಲಿ ಸಾಕಷ್ಟು ಮಾಸ್ತಿ ಕಲ್ಲುಗಳು ಪತ್ತೆಯಾಗಿವೆ. ಇವು ಇತಿಹಾಸ, ಚರಿತ್ರೆಯ ಭವ್ಯ ಕುರುಹುಗಳಾಗಿವೆ.