ಮಂಗಳೂರು, ಎ28(Daijiworld News/SS): ಫೋನಿ ಚಂಡಮಾರುತ ದಕ್ಷಿಣ ಭಾರತದಲ್ಲಿ ಮಳೆಯಬ್ಬರ ಎಬ್ಬಿಸಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿದ್ದು, ಮುಂದಿನ 72 ಗಂಟೆಗಳಲ್ಲಿ ಆಂಧ್ರ, ತಮಿಳುನಾಡು, ಕೇರಳ, ತೆಲಂಗಾಣದಲ್ಲಿ ಬಿರುಗಾಳಿ ಜೊತೆಗೆ ಮಳೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಹಲವು ಕಡೆಗಳಲ್ಲಿ ಭಾರೀ ಮಳೆಯಾಗೋ ನಿರೀಕ್ಷೆ ಇದೆ. ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ “ಫೋನಿ’ ಚಂಡಮಾರುತದ ಪರಿಣಾಮವಾಗಿ ಕರಾವಳಿಯಲ್ಲಿ ಎ. 29ರಿಂದ ಮೂರು ದಿನ ರಾಜ್ಯದ ದಕ್ಷಿಣ ಒಳನಾಡು ಸಹಿತ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಫೋನಿ ಚಂಡಮಾರುತ ನಿಧಾನವಾಗಿ ಗಂಟೆಗೆ 9 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಮುಂದೆ ಅತೀ ತೀವ್ರತೆ ಪಡೆದು 170 ಕಿ.ಮೀ.ವರೆಗೂ ವೇಗ ಪಡೆಯಲಿದೆ. ಪ್ರಸ್ತುತ ಇದರ ಕೇಂದ್ರಬಿಂದು ಶ್ರೀಲಂಕಾ ಗಡಿಯಿಂದ 850 ಕಿ.ಮೀ. ಮತ್ತು ಚೆನ್ನೈಯಿಂದ 1,200 ಕಿ.ಮೀ. ದೂರದಲ್ಲಿದೆ. ಎ. 30ರ ವೇಳೆಗೆ ತೀವ್ರ ಸ್ವರೂಪದ ಚಂಡಮಾರುತವಾಗಲಿದೆ. ಅನಂತರ ಕ್ರಮೇಣ ಅದರ ವೇಗ ಕಡಿಮೆಯಾಗಲಿದೆ.
ಈಗಿನ ಚಲನೆಯ ಪ್ರಕಾರ ಅದು ಸಮುದ್ರದಲ್ಲಿಯೇ ತಿರುವು ಪಡೆಯಲಿದೆ. ಭಾರತದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಫೋನಿ ಚಂಡಮಾರುತದ ಪ್ರಭಾವದಿಂದ ಎ. 29, 30ರಂದು ಕೇರಳ, ತಮಿಳುನಾಡು ಕರಾವಳಿ ಪ್ರದೇಶದಲ್ಲಿ ಮತ್ತು ಎ. 30 ಮತ್ತು ಮೇ 1ರಂದು ಆಂಧ್ರಪ್ರದೇಶದ ಕರಾವಳಿ ತೀರದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕಡಲು ಕೂಡ ಕೆಲವು ಕಡೆಗಳಲ್ಲಿ ಪ್ರಕ್ಷುಬ್ಧಗೊಳ್ಳುವ ಸಂಭವವಿದೆ.
ಈ ವೇಳೆ ರಾಜ್ಯ ಕರಾವಳಿ ಪ್ರದೇಶದಲ್ಲಿ ಗಾಳಿಯ ವೇಗ ಕೂಡ ಹೆಚ್ಚಾಗಲಿದ್ದು, ಜಿಲ್ಲೆಯಲ್ಲಿ ಸುಮಾರು 20ರಿಂದ 30 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಮೂರು ದಿನಗಳ ಕಾಲ ಸಮುದ್ರದ ಅಬ್ಬರ ಇರಲಿದೆ ಎಂದು ತಿಳಿಸಿದೆ.
ಲಕ್ಷದ್ವೀಪ ಸೇರಿದಂತೆ ಕೇರಳ ಕರಾವಳಿ ಸಮುದ್ರದಲ್ಲಿ ಏ.29ರವರೆಗೆ ಭಾರಿ ಗಾಳಿ ಬೀಸುವ ಸಾಧ್ಯತೆ ಇದ್ದು, ಆ ಭಾಗಕ್ಕೆ ಮೀನುಗಾರಿಕೆಗೆ ತೆರಳಿರುವ ಕರ್ನಾಟಕ ಕರಾವಳಿಯ ಮೀನುಗಾರರೂ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.