ಕಾಸರಗೋಡು,ಏ28(DaijiworldNews/AZM):ರಾಷ್ಟ್ರೀಯ ತನಿಖಾ(ಎನ್ ಐಎ)ಸಂಸ್ಥೆ ಶ್ರೀಲಂಕಾದ ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಕಾಸರಗೋಡಿನಲ್ಲಿ ಇಬ್ಬರು ಹಾಗೂ ಪಾಲಕ್ಕಾಡ್ ನಲ್ಲಿ ಒಬ್ಬ ಸೇರಿದಂತೆ ಮೂವರು ಶಂಕಿತರನ್ನು ಬಂಧಿಸಿದೆ
ಅಬೂಬಕ್ಕರ್ ಸಿದ್ಧೀಕ್ ಹಾಗೂ ಅಹ್ಮದ್ ಅರಾಫತ್ ಬಂಧಿಸಲ್ಪಟ್ಟ ಯುವಕರಾಗಿದ್ದು ಇವರನ್ನು ವಿಚಾರಣೆಗಾಗಿ ಎನ್ಐಎ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ. ಶ್ರೀಲಂಕಾವನ್ನು ನಡುಗಿಸಿದ ಸರಣಿ ಸ್ಫೋಟದ ಸಂಚಿನ ರೂವಾರಿ ಝಹ್ರಾನ್ ಹಾಶಿಂ ಜತೆ ನಿಕಟ ಸಂಪರ್ಕ ಹೊಂದಿದ್ದರು ಹಾಗೂ ಈ ಯುವಕರು ಝಹ್ರಾನ್ ಚಿಂತನೆಗಳಿಂದ ಆಕರ್ಷಿತರಾಗಿದ್ದರು. ಎಂಬ ಮಾಹಿತಿ ಮೇರೆಗೆ ಎನ್ಐಎ ಈ ಯುವಕರನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ಕುಖ್ಯಾತ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಸ್ ಜತೆಗೂ ಈ ಯುವಕರು ನಿಕಟ ಸಂಪರ್ಕ ಹೊಂದಿದ್ದರು ಎಂದು ಎನ್ಐಎ ತಿಳಿಸಿದೆ. ಶಂಕಿತರಿಂದ ವಿವಾದಾತ್ಮಕ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್ನ ಬೋಧನೆಗಳ ಡಿವಿಡಿಗಳು ಮೊಬೈಲ್ ಫೋನ್ಗಳು ಮತ್ತು ಇತರ ವಸ್ತುಗಳನ್ನು ಎನ್ಐಎ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಸರಗೋಡಿನಿಂದ ಇಬ್ಬರು ಮತ್ತು ಪಾಲಕ್ಕಾಡ್ನಿಂದ ಒಬ್ಬ ಶಂಕಿತ ಯುವಕನನ್ನು ಬಂಧಿಸಲಾಗಿದ್ದು, ಅವರ ಮನೆಗಳಿಂದ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರ ವಿಸ್ತೃತ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.