ಮಂಗಳೂರು,ಏ28(DaijiworldNews/AZM): ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುತ್ತೇವೆ ಎನ್ನುವ ಧ್ಯೇಯದೊಂದಿಗೆ ಪ್ರತಿಯೊಬ್ಬರು ಪೊಲೀಸ್ ಕೂಡಾ ತಮ ಅಧಿಕಾರವನ್ನು ಸ್ವೀಕರಿಸುತ್ತಾರೆ. ಆದರೆ ಇಂತಹ ಒಂದು ಉನ್ನತ ಸ್ಥಾನದಲ್ಲಿದ್ದ ಮಾಜಿ ಪೊಲೀಸ್ ಅಧಿಕಾರಿ ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಯನ್ನು ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಮಾಲೆಗಾಂವ್ ಸ್ಫೋಟ ಪ್ರಕರಣವು 'ಪ್ರತಿಭಟನೆ' ಎಂದು ಸಮರ್ಥಿಸಿಕೊಂಡು ವಿವಾದ ಸೃಷ್ಟಿಸಿದ್ದಾರೆ. ಈ ಕುರಿತು ಫೇಸ್ ಬುಕ್ ನ 'ಜಿಜ್ಞಾಸು' ಎನ್ನುವ ಗ್ರೂಪ್ ನಲ್ಲಿ ಪೋಸ್ಟ್ ಹಾಕಿರುವ ಅನುಪಮಾ, "ಇಸ್ಲಾಮಿಕ್ ಉಗ್ರವಾದದ ಬಗ್ಗೆ ಮಾತನಾಡಿದ ಕೂಡಲೆ ಹೇಳುವುದು ಮಾಲೆಗಾಂವ್ ಬ್ಲಾಸ್ಟ್ ಬಗ್ಗೆ, ಸಾಧ್ವಿ ಹಾಗೂ ಪುರೋಹಿತ್ ಬಗ್ಗೆ. ಅದನ್ನು ಹಿಂದೂ ಭಯೋತ್ಪಾದನೆ ಎಂದು ಘೋಷಿಸಿ ಎಂದಿನಂತೆ ಬಾಂಧವರಿಗೆ ಬಕೆಟ್ ಹಿಡಿಯಲು ಹೋಗಿದ್ದು ಕಾಂಗ್ರೆಸ್ ಪಕ್ಷ. ಒಂದು ವೇಳೆ ಸಾಧ್ವಿ ಹಾಗೂ ಪುರೋಹಿತ್ ರವರು ಬ್ಲಾಸ್ಟ್ ಮಾಡಿದ್ದೇ ಆದಲ್ಲಿ ಅದು ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಪ್ರತಿಭಟನೆಯಾಗಿಯೇ ವಿನಃ ನಿಮ್ಮ ಹಾಗೆ ಧರ್ಮ ಸ್ಥಾಪನೆಗಾಗಿ ಅಲ್ಲ" ಎಂದಿದ್ದು, ಭಯೋತ್ಪಾದನಾ ಕೃತ್ಯವನ್ನು ಸಮರ್ಥಿಸಿದ್ದಾರೆ.
ಅನುಪಮಾ ಶೆಣೈಯ ಈ ಪೋಸ್ಟ್ ವಿವಾದ ಸೃಷ್ಟಿಸಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.