ಉಡುಪಿ,ಏ 27 (Daijiworld News/MSP): ಮಲ್ಪೆ ವಿಠೋಭಾ ಭಜನಾ ಮಂದಿರದ ಬಳಿ ಸಮುದ್ರ ದಡದಲ್ಲಿ ಮಲಗಿದ್ದ ಯುವಕನಿಗೆ ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿ ಬಳಿಕ ಸುತ್ತಲಿನ ಮನೆಗಳ ಬಾಗಿಲು ಬಡಿಯುತ್ತಾ ದಾಂಧಲೆ ನಡೆಸುತ್ತಿದ್ದ ಸಂದರ್ಭ ಸಾರ್ವಜನಿಕರು ನೀಡಿದ ತಿರುಗೇಟಿಗೆ ಆತ ಸಾವನ್ನಪ್ಪಿದ್ದ ಘಟನೆ ಏ. 27 ರ ಶನಿವಾರ ತಡರಾತ್ರಿ ನಡೆದಿದೆ.
ಮೃತರನ್ನು ಹೈದರಾಬಾದ್ ನಿವಾಸಿ ಗುರುವೇಲು (35) ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ್ದ ಗುರುವೇಲುವಿನಿಂದ ತೀವ್ರ ಹಲ್ಲೆಗೊಳಗಾದ ಮಲ್ಪೆ ಕೊಳ ನಿವಾಸಿ ಸುರೇಶ್ ಕರ್ಕೇರ ಎಂಬವರ ಪುತ್ರ ಅಮಿತ್(27) ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎ.27ರಂದು ರಾತ್ರಿ 10:30ರ ಸುಮಾರಿಗೆ ಅಮಿತ್ ಹಾಗೂ ಕಾರ್ತಿಕ್ ಸಾಲ್ಯಾನ್ ಎಂಬವರು ಕೊಳದ ಹನುಮಾನ್ ವಿಠೋಭಾ ಭಜನಾ ಮಂದಿರದ ಎದುರು ಸಮುದ್ರದ ದಡದ ಕಲ್ಲುಗಳ ಬಳಿ ಮಲಗಿದ್ದರು. ಮಧ್ಯರಾತ್ರಿ 12:30ರ ಸುಮಾರಿಗೆ ಅಲ್ಲಿಗೆ ಬಂದ ಗುರುವೇಲು ಮರದ ದೊಣ್ಣೆಯಿಂದ ಅಮಿತ್ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ. ಬಳಿಕ ವಿಠೋಭಾ ಭಜನಾ ಮಂದಿರದ ಬಳಿ ಕೈಯಲ್ಲಿ ದೊಣ್ಣೆ ಹಿಡಿದು ತಿರುಗಾಡುತ್ತಿದ್ದ ಗುರುವೇಲುವನ್ನು ಗಮನಿಸಿದ್ದ ಅಲ್ಲಿ ಸೇರಿದ್ದವರು ಆತ್ಮರಕ್ಷಣೆಗಾಗಿ ಆತನ ಕೈಯಿಂದ ಮರದ ದೊಣ್ಣೆಯನ್ನು ಕಸಿದು ತಿರುಗೇಟು ನೀಡಿದ್ದಾರೆ.
ಸಾರ್ವಜನಿಕರು ಹಾಗೂ ಪೊಲೀಸರು ಬಂಧಿಸಿ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವೇಲು ಸಾವನ್ನಪ್ಪಿದ್ದಾನೆ. ಈ ಬಗ್ಗೆ ಗಿರೀಶ್ ಮೈಂದನ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಅದೇ ರೀತಿ ಗುರುವೇಲುವಿನಿಂದ ಹಲ್ಲೆಗೆ ಒಳಗಾದ ಅಮಿತ್ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಮಲ್ಪೆ ಠಾಣಾಧಿಕಾರಿ ಮಧು ತನಿಖೆ ನಡೆಸುತ್ತಿದ್ದಾರೆ.ಈ ಪ್ರಕರಣ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲವರನ್ನು ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ.