ಸುಬ್ರಹ್ಮಣ್ಯ, ಏ 29 (Daijiworld News/MSP): ನಾಗಾರಾಧನೆಗೆ ಪ್ರಸಿದ್ಧಿ ಪಡೆದಿರುವ, ಹಾಗೂ ಆದಾಯ ಗಳಿಕೆಯಲ್ಲಿ ರಾಜ್ಯಕ್ಕೆ ನಂ. 1 ಸ್ಥಾನ ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 85 ಕೋಟಿ ವೆಚ್ಚದಲ್ಲಿ ನೂತನ ಚಿನ್ನದ ರಥ ನಿರ್ಮಾಣಕ್ಕೆ ಚಾಲನೆ ದೊರಕಿದೆ. ರಾಜ್ಯ ಸರ್ಕಾರ ಇದಕ್ಕಾಗಿ ಮುಂದಡಿ ಇಟ್ಟಿದ್ದು, ದೇವಳದ ಆಡಳಿತ ಮಂಡಳಿ ಸಭೆ ಸೋಮವಾರ ನಡೆಯಲಿದೆ.
13 ವರ್ಷಗಳ ಹಿಂದೆ 2006 ರಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನೂತನ ಚಿನ್ನದ ರಥ ನಿರ್ಮಾಣಕ್ಕೆ ಆದೇಶಿಸಿದ್ದರು. ಅಂದು ರೂ.15 ಕೋಟಿ ವೆಚ್ಚದಲ್ಲಿ ರಥ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಕೂಡ ನಡೆದಿತ್ತು. ಬಳಿಕ ದರ ನಿಗದಿಪಡಿಸುವಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದ್ದರಿಂದ ರಥ ನಿರ್ಮಾಣ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಕುಕ್ಕೆ ದೇಗುಲದಲ್ಲಿ ರಥ ನಿರ್ಮಾಣವಾಗದೆ ಇದ್ದರಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ದೋಷ ಉಂಟಾಗುವ ಸಾಧ್ಯತೆ ಕುರಿತು ಜ್ಯೋತಿಷಿ ದ್ವಾರಕನಾಥ್ ಅವರಿಂದ ಸಲಹೆಗಳು ಬಂದ ಕಾರಣದಿಂದ ಹಾಲಿ ಮುಖ್ಯಮಂತ್ರಿ ಅವರು ಮುಜರಾಯಿ ಇಲಾಖೆಗೆ ಈ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದಾರೆ.
250 ಕೆ.ಜಿ ಚಿನ್ನ ಬಳಕೆ ಸಾಧ್ಯತೆ:
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 320 ಕೋಟಿ ರೂ. ಸ್ವಂತ ನಿಧಿ ಇದೆ. ಈ ಮೊತ್ತದಲ್ಲಿ ಚಿನ್ನದ ರಥ ಪೂರ್ಣಗೊಳಿಸಬೇಕು. ಮೇ 6 ರಂದು ಕ್ಯಾಬಿನೆಟ್ ಸಭೆಯಲ್ಲಿ ಯೋಜನೆ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಶೀಘ್ರ ಪ್ರಸಾಪನೆ ಕಳುಹಿಸಿ ಎಂದು ದೇವಸ್ಥಾನದ ಆಡಳಿತ ಮಂಡಳಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ. ಚಿನ್ನದ ರಥವನ್ನು 80-85 ಕೋಟಿ ವೆಚ್ಚದಲ್ಲಿ 250 ಕೆ.ಜಿ ಚಿನ್ನ ಬಳಸಿ ತಯಾರಿಸುವ ಸಾಧ್ಯತೆ ಇದೆ.