ಉಡುಪಿ,ಏ 29 (Daijiworld News/MSP): ಮಲ್ಪೆ ಬಂದರಿನಿಂದ ಮೀನುಗಾರಿಕೆಗೆಂದು ತೆರಳಿ ಕಣ್ಮರೆಯಾಗಿ ನಾಲ್ಕು ತಿಂಗಳು ಕಳೆದರೂ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಮೀನುಗಾರರು ಇನ್ನು ಪತ್ತೆಯಾಗಿಲ್ಲ.
ನಾಪತ್ತೆ ಮೀನುಗಾರರ ಸುಳಿವು ಸಿಗದೇ ಇರುವುದರಿಂದ ಸೋಮವಾರ ಶಾಸಕರಾದ ಕೆ ರಘುಪತಿ ಭಟ್ ರವರ ನೇತೃತ್ವದಲ್ಲಿ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆ ನಡೆಸಲು ಸಮುದ್ರಕ್ಕೆ ತೆರಳಿದ್ದಾರೆ.
ಮೀನುಗಾರರು ನಾಪತ್ತೆಯಾದ ಬಗ್ಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮಾನ್ ಅವರನ್ನು ಭೇಟಿ ನೀಡಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ರಘುಪತಿ ಭಟ್ ಅವರು ಮಾತುಕತೆ ನಡೆಸಿದ್ದರು. ಬಳಿಕ ಸ್ವತಃ ನಿರ್ಮಲಾ ಸೀತಾರಾಮಾನ್ ಅವರೇ ಉಡುಪಿಗೆ ಆಗಮಿಸಿ ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು ಮತ್ತು ಕೇಂದ್ರ ಸರಕಾರ ಮತ್ತಷ್ಟು ಪತ್ತೆ ಕಾರ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಸಚಿವರಿಗೆ ಮನವಿ ಮಾಡಿದ್ದು, ನಮ್ಮನ್ನು ಕೂಡ ಬೋಟ್ ಮೂಲಕ ಸಮುದ್ರಕ್ಕೆ ಹೋಗುವಂತೆ ಅವಕಾಶ ನೀಡಬೇಕು ಮತ್ತು ನಾಪತ್ತೆಯಾದ ಸ್ಥಳವನ್ನು ನಾವು ಕೂಡ ವೀಕ್ಷಿಸಬೇಕು ಎಂದ ಕೇಳಿಕೊಂಡಿದ್ದರು. ಅದೇ ರೀತಿ ಕುಟುಂಬಸ್ಥರ ಮನವಿಯ ಮೇರೆಗೆ ಶಾಸಕರಾದ ಕೆ ರಘುಪತಿ ಭಟ್ ಅವರ ನೇತೃತ್ವದಲ್ಲಿ ಸೋಮವಾರ ಮುಂಜಾನೆ 4 ಗಂಟೆಗೆ ಭಾರತೀಯ ಭೂಸೇನೆಯ ಅಧಿಕಾರಿಗಳ ಜೊತೆಗೆ ಮತ್ತು ನಾಪತ್ತೆಯಾದ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆಗೆ ತೆರಳಿದ್ದಾರೆ.