ಸುಬ್ರಹ್ಮಣ್ಯ, ಏ 29 (Daijiworld News/MSP): ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಹಾಗೂ ದರ್ಪಣ ತೀರ್ಥ ನದಿಗಳ ಸಹಿತ ಪುಣ್ಯ ಕ್ಷೇತ್ರವನ್ನು ಸ್ವಚ್ಚಗೊಳಿಸುವ ಯುವ ಬ್ರಿಗೇಡ್ ಆಂದೋಲನ " ಕುಮಾರ ಸಂಸ್ಕಾರ" ಭಾನುವಾರ ಯಶಸ್ವಿಯಾಗಿ ಪೂರ್ಣಗೊಂಡಿತು.ಎರಡು ದಿನಗಳ ನದಿ ಸ್ವಚ್ಛತಾ ಆಂದೋಲನ ‘ಕುಮಾರ ಸಂಸ್ಕಾರ’ ಶನಿವಾರ ಆರಂಭಗೊಂಡಿದ್ದು, 300ಕ್ಕೂ ಅಧಿಕ ಮಂದಿ ಪಾಲ್ಗೊಂಡರು. ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ ಯುವ ಬ್ರಿಗೇಡ್ ಸದಸ್ಯರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ನದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನ, ನಮ್ಮ ಸುಬ್ರಹ್ಮಣ್ಯ ಯುವ ತಂಡ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಸದಸ್ಯರು, ಕುಕ್ಕೆ ದೇವಳ ನೌಕರರು ಮುಂಜಾನೆ ಆದಿಸುಬ್ರಹ್ಮಣ್ಯದ ಬಳಿ ದರ್ಪಣತೀರ್ಥ ನದಿಗಿಳಿದು ಸ್ವಚ್ಛತಾ ಸೇವೆ ಆರಂಭಿಸಿದರು. ಮುಂದೆ ಆದಿ, ರುದ್ರಪಾದ, ಸವಾರಿ ಮಂಟಪ ಮತ್ತು ವಾಹನ ಪಾರ್ಕಿಂಗ್ ತಾಣದ ತನಕ ನದಿ ಹಾಗೂ ನಂತರ ಕುಮಾರಧಾರಾ ಸ್ನಾನಘಟ್ಟದಿಂದ ಸೇತುವೆ ತನಕ ನದಿಯ ಒಡಲಿನಲ್ಲ್ಲಿದ್ದ ಭಕ್ತರು ಎಸೆದ ಬಟ್ಟೆ, ಪ್ಲಾಸ್ಟಿಕ್, ಸಾಬೂನು ಬಾಚಣಿಕೆ , ತೆಂಗಿನಕಾಯಿ ಪೋಟೋ, ಬಾಟಲಿ ಮತ್ತಿತರ ತ್ಯಾಜ್ಯ ತೆರವುಗೊಳಿಸಿ ಗ್ರಾಪಂನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ವಿಶೇಷ ಎಂದರೆ ಸುಬ್ರಹ್ಮಣ್ಯ ಕ್ಷೇತ್ರ ಪರಿಸರದಲ್ಲಿ ಯಾವುದೇ ಮದ್ಯದಂಗಡಿ ಇಲ್ಲದಿದ್ದರೂ ಈ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ, ಯಾತ್ರಾರ್ಥಿಗಳು ಮೋಜಿಗಾಗಿ ಕ್ಷೇತ್ರಕ್ಕೆ ಬಂದು ಕುಡಿದು ಬಾಟಲಿಗಳನ್ನು ಎಸೆದಿರುವುದು ಸಾಬೀತಾಗಿದೆ. ಸ್ವಚ್ಚತೆಯ ವೇಳೆ ಕನಿಷ್ಠ 10,000 ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳಗಳಲ್ಲಿ 3,000ಕ್ಕೂ ಹೆಚ್ಚು ಹೆಂಡದ ಬಾಟಲಿಗಳು ಕಾರ್ಯಕರ್ತರಿಗೆ ಸಿಕ್ಕಿದೆ.
ಇನ್ನು ಸ್ವಚ್ಛತಾ ಕಾರ್ಯ ನೆರವೇರಿಸುವ ಕಾರ್ಯಕರ್ತರಿಗೆ ದೇವಳದ ವತಿಯಿಂದ ಊಟ ಮತ್ತು ಉಪಾಹಾರ, ತ್ಯಾಜ್ಯ ವಿಲೇವಾರಿಗೆ ಟ್ರಾಕ್ಟರ್ ಒದಗಿಸಲಾಯಿತು. ಗ್ರಾಪಂನಿಂದ ತ್ಯಾಜ್ಯ ವಿಲೇವಾರಿ ವಾಹನ ಮತ್ತು ಸಂಪುಟ ನರಸಿಂಹ ಸ್ವಾಮಿ ಮಠದಿಂದ ಟ್ರಾಕ್ಟರ್ ನೀಡಲಾಗಿತ್ತು. ಕೃಷಿಕ ರವೀಂದ್ರ ಕುಮಾರ್ ರುದ್ರಪಾದ ಮಜ್ಜಿಗೆ ನೀಡಿದರು.