ಉಪ್ಪಿನಂಗಡಿ, ಎ30(Daijiworld News/SS): ಸುಮಾರು 500ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಪ್ರಸಿದ್ಧ ದೈವಸ್ಥಾನವೊಂದು ಕಾಡಿನೊಳಗೆ ಬೆಳಿಕಿಗೆ ಬಂದ ಘಟನೆ ಪೆರ್ನೆ ಗ್ರಾಮದ ಕೊರತ್ತಿಕಟ್ಟೆ ಮಾಡತ್ತಾರು ಎಂಬಲ್ಲಿ ನಡೆದಿದೆ.
ಕಳೆದ ಅನೇಕ ವರುಷಗಳಿಂದ ಪೆರ್ನೆ ಗ್ರಾಮದ ಕೊರತ್ತಿಕಟ್ಟೆ ಮಾಡತ್ತಾರು ಪ್ರದೇಶದ ಜನ ಪದೇ ಪದೇ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು. ಈ ಗ್ರಾಮದಲ್ಲಿ ನಡೆಯುತ್ತಿದ್ದ ಅಸಹಜ ಸಾವು, ನೋವು, ರೋಗ, ಕಾಯಿಲೆಗಳು ಜನರನ್ನು ಸಂಕಷ್ಟಕ್ಕೆ ತಳ್ಳಿ ಹಾಕಿತ್ತು. ಜೊತೆಗೆ ಪೆರ್ನೆ ಗ್ರಾಮದ ಕೊರತ್ತಿಕಟ್ಟೆ ಮಾಡತ್ತಾರು ಪ್ರದೇಶದಲ್ಲಿ ಸತ್ತ ನಾಗರ ಹಾವುಗಳು ಅನೇಕ ಬಾರಿ ಜನರ ಕಣ್ಣಿಗೆ ಬಿದ್ದಿತ್ತು.
ಈ ಎಲ್ಲಾ ಘಟನೆಗಳಿಂದ ಕಳವಳಗೊಂಡ ಗ್ರಾಮಸ್ಥರು ಒಟ್ಟು ಸೇರಿ ಅಷ್ಟಮಂಗಳ ಪ್ರಶ್ನೆಯ ಮೊರೆ ಹೋದರು. ಅಷ್ಠಮಂಗಳ ಪ್ರಶ್ನೆ ಇರಿಸಿದ ಖ್ಯಾತ ಜ್ಯೋತಿಷಿ ಕೆ.ವಿ. ಗಣೇಶ್ ಭಟ್ ಮುಳಿ, 500 ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನವೊಂದು ಕಾಡಿನೊಳಗೆ ಪಾಳು ಬಿದ್ದಿದೆ. ಈ ಪ್ರದೇಶದಲ್ಲಿದ್ದ ಭಂಡಾರದ ಮನೆಯೂ ನೆಲ ಸಮವಾಗಿದೆ. ಭಂಡಾರ ಮನೆಯಲ್ಲಿದ್ದ ದೈವದ ಮೂರ್ತಿಗಳೂ ಕೂಡಾ ಮಣ್ಣಿನಡಿ ಸೇರಿ ಕೊಂಡಿವೆ. ಈ ದೈವಸ್ಥಾನದ ಪುನರುತ್ಥಾನವಾಗಬೇಕು ಎಂದು ತಿಳಿಸಿದ್ದರು.
ಜ್ಯೋತಿಷಿ ಕೆ.ವಿ. ಗಣೇಶ್ ಭಟ್ ಮುಳಿ ಪ್ರಶ್ನೆಯಲ್ಲಿ ಹೇಳಿದಂತೆ ಗ್ರಾಮಸ್ಥರು ಒಟ್ಟು ಸೇರಿ ಪೆರ್ನೆ ಗ್ರಾಮದ ಕೊರತ್ತಿಕಟ್ಟೆ ಮಾಡತ್ತಾರು ಪ್ರದೇಶದ ಕಾಡಿನಲ್ಲಿ ಹುಡುಕಾಟ ನಡೆಸಿದಾಗ ಮರ ಗಿಡಗಳು ಬೆಳೆದಿರುವ ಸ್ಥಿತಿಯಲ್ಲಿ ದೈವ ಸ್ಥಾನದ ಕಟ್ಟಡದ ಪಳೆಯುಳಿಕೆಗಳು ಕಂಡು ಬಂದಿದೆ. ಪಿಲಿಚಾಮುಂಡಿ, ಕೊರತ್ತಿ, ಹಾಗೂ ಉಳ್ಳಾಕ್ಲು ದೈವದ ಮೂರೂ ಗುಡಿಗಳು ಕಾಲಾಂತರದಲ್ಲಿ ಶಿಥಿಲಗೊಂಡು ಕೇವಲ ಗುಡಿಯ ಪಂಚಾಂಗ ಮಾತ್ರ ಮರಗಿಡಗಳ ಮಧ್ಯೆ ಗೋಚರಿಸುತ್ತಿರುವುದು ಗಮನಕ್ಕೆ ಬಂದಿದೆ.
ಮಾತ್ರವಲ್ಲ, ಪೆರ್ನೆ ಗ್ರಾಮದ ಅತ್ತಜಾಲು ಎಂಬಲ್ಲಿನ ಮನೆಯೊಂದರ ಪ್ರದೇಶದ ಕೆಲ ಸ್ಥಳದಲ್ಲಿ ಅಗೆದ ವೇಳೆ, ಮೂರು ದೈವಗಳ ಮೊಗ, ದೀಪ, ಗಂಟೆ, ದೈವಾರಾಧನೆ ಪರಿಕರಗಳು ಗೋಚರಿಸಿದೆ.