ಉಡುಪಿ, ಏ 30(Daijiworld News/MSP): ಪಾದಚಾರಿ ಮಹಿಳೆಗೆ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮೃತರನ್ನು ಮಣಿಪಾಲದ ಸರಳೆಬೆಟ್ಟು ನಿವಾಸಿ ವಿನಯಾ ಮಾರ್ಗರೇಟ್ ಮಾಬೆನ್ (54) ಎಂದು ಗುರುತಿಸಲಾಗಿದೆ. ಭಾನುವಾರದಂದು ಈಶ್ವರ ನಗರದ ಉಮಾ ಮಹೇಶ್ವರಿ ದೇವಸ್ಥಾನದ ತಿರುವು ಬಳಿ ವಿನಯಾ ಮಾರ್ಗರೇಟ್ ನಡೆದುಕೊಂಡು ಹೋಗುತ್ತಿದ್ದಾಗ ರಿಕ್ಷಾ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ.
1988ರಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ವೃತ್ತಿಜೀವನವನ್ನು ಆರಂಭಿಸಿದ್ದ ಅವರು ವಾರ್ಡ್ ಸಿಸ್ಟರ್ ಆಗಿ, ಪ್ರಸ್ತುತ ಅಸಿಸ್ಟೆಂಟ್ ನರ್ಸಿಂಗ್ ಸೂಪರಿಂಟೆಂಡೆಂಟ್ ಆಗಿದ್ದರು. ಮೃತರು ಪತಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.
ಉಡುಪಿ-ಮಣಿಪಾಲ ರಸ್ತೆಯ (ರಾ. ಹೆ 169ಎ) ಕಡಿಯಾಳಿಯಲ್ಲಿ ಮಾ.4ರಂದು ರಿಕ್ಷಾ ಢಿಕ್ಕಿ ಹೊಡೆದು ಓರ್ವ ಮಹಿಳೆ ಮೃತಪಟ್ಟಿದ್ದರು. ಮಾ.16ರಂದು ಇದೇ ರಸ್ತೆಯ ಮಣಿಪಾಲದಲ್ಲಿ ರಿಕ್ಷಾ ಢಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟಿದ್ದರು.