ಕಾಪು, ಏ 30 (Daijiworld News/MSP): ಕೆಲ ದಿನಗಳ ಹಿಂದೆ ಪಂಚಕರ್ಮ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ತೆರಳಿದ್ದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಂದೆ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಆಗಮಿಸಿದ್ದು ಮತ್ತೆ ಚಿಕಿತ್ಸೆ ಮುಂದುವರಿಸಿದ್ದಾರೆ. ಕಾಪುವಿನ ಬೀಚ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು ಅವರಿಗೆ ಭಾರೀ ಭದ್ರತೆಯನ್ನು ನೀಡಲಾಗಿದೆ.
ಪಂಚಕರ್ಮ ಪ್ರಕೃತಿ ಚಿಕಿತ್ಸೆಗಾಗಿ ಹೆಚ್.ಡಿ ಕುಮಾರಸ್ವಾಮಿ 5 ದಿನಗಳ ಕಾಲ ಉಳಿದುಕೊಂಡು ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ. ಹಾಗೇ ದೇವೇಗೌಡರಿಗೆ ಒಂದು ವಾರದ ಕೋರ್ಸ್ ನಿಗದಿಯಾಗಿದೆ. ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿರುವ ಸಿಎಂ ಕುಮಾರಸ್ವಾಮಿ, ರೆಸಾರ್ಟ್ ಸುತ್ತಮುತ್ತ ಮಾಧ್ಯಮಗಳನ್ನು ಬಿಡದಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ರೆಸಾರ್ಟ್ ಆಸುಪಾಸು ಮಾಧ್ಯಮಗಳಿಗೆ ಚಿತ್ರೀಕರಣವನ್ನೂ ನಿರ್ಬಂಧಿಸಲಾಗಿದೆ. ಇದಲ್ಲದೆ ಯಾರ ಕಣ್ಣಿಗೂ ಬೀಳಬಾರದೆಂದು ರೆಸಾರ್ಟ್ ಸುತ್ತ ಹಸಿರು ಬೇಲಿ ಹಾಕುವಂತೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ
ಸಿಎಂ ಹಾಗೂ ಮಾಜಿ ಪ್ರಧಾನಿಗೆ ಮೂರನೇ ದಿನದ ಪಂಚಕರ್ಮ ಚಿಕಿತ್ಸೆ ಮುಂದುವರಿದಿದೆ. ಯೋಗ, ಧ್ಯಾನದಲ್ಲಿ ಜೆಡಿಎಸ್ ವರಿಷ್ಠರು ಮಗ್ನರಾಗಿದ್ದಾರೆ. ಹೀಗಾಗಿ ರೆಸಾರ್ಟ್ ಸುತ್ತ ಮಾಧ್ಯಮದವರಿಗೆ ನಿಷೇಧ ಹೇರಿದ್ದಾರೆ. ರೆಸಾರ್ಟ್ನ ಬೀಚ್ ಆವರಣದಲ್ಲಿ ಸೋಮವಾರದಂದು ಶಾಸಕ ಭೋಜೇಗೌಡ ಹಾಗೂ ಸಚಿವ ಸಾರಾ ಮಹೇಶ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡು ಸಾಕಷ್ಟು ಸುದ್ದಿಯಾಗಿತ್ತು. ಹೀಗಾಗಿ ರೆಸಾರ್ಟ್ ಆವರಣ ಯಾರಿಗೂ ಕಾಣದಂತೆ ಸುತ್ತಲೂ ಹಸಿರು ಪರದೆ ಬೇಲಿ ಹಾಕುವಂತೆ ರೆಸಾರ್ಟ್ ಸಿಬ್ಬಂದಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.