ಬಂಟ್ವಾಳ, ನ 18: ಎರಡು ದಿನಗಳ ಹಿಂದೆಯಷ್ಟೆ ಮಹಿಳೆಯೊಬ್ಬರು ಬೀದಿ ನಾಯಿ ಕಡಿತಕ್ಕೊಳಗಾಗಿ ಆಸ್ಪತ್ರೆ ಸೇರಿದ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಗರ್ಭಿಣಿ ಮಹಿಳೆ ಸಹಿತ ಇಬ್ಬರಿಗೆ ಭಂಡಾರಿಬೆಟ್ಟುವಿನಲ್ಲಿ ಬೀದಿ ನಾಯಿ ಕಡಿದಿರುವ ಘಟನೆ ನಡೆದಿದೆ.
ಭಂಡಾರಿಬೆಟ್ಟುವಿನ ನಿವಾಸಿ ಭಾರತಿ ( ಗರ್ಭಿಣಿ ಹೆಂಗಸು ) ಹಾಗೂ ಶಾಲಾ ಬಾಲಕ ಕೌಶಿಕ್ ಎಂಬುವವರು ಬೀದಿ ನಾಯಿ ಕಡಿತಕ್ಕೊಳಗಾದವರು.
ಗಾಯಾಳು ಗರ್ಭಿಣಿ ಹೆಂಗಸನ್ನು ಮಂಗಳೂರಿನ ವೆನ್ಲಾಕ್ ಆಸ್ಫತ್ರೆಗೆ ದಾಖಲಿಸಲಾಗಿದ್ದರೆ, ಕೌಶಿಕ್ ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೆ ಇದೇ ಸ್ಥಳದಲ್ಲಿ ಹೇಮಾವತಿ ಎಂಬ ಮಹಿಳೆಗೆ ಬೀದಿ ನಾಯಿ ಕಡಿದಿತ್ತು.
ಬೀದಿ ನಾಯಿ ಹಾವಳಿಗಳ ಬಗ್ಗೆ ಪುರಸಭೆಗೆ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮಕೈಗೊಳ್ಳದೆ ಅಸಢ್ಡೆ ವಹಿಸಿದ್ದರಿಂದ ಬೀದಿ ನಾಯಿಗಳ ಉಪಟಳ ಇಲ್ಲಿ ಮಿತಿ ಮೀರಿದೆ. ಪುರಸಭೆಯ ಆಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಆಕ್ರೋಶ ವ್ಯಕ್ತ ವಾಗಿದ್ದು, ಈ ನಾಯಿಗಳ ಕಾಟದಿಂದ ಇನ್ನೆಷ್ಟು ಮಂದಿ ಆಸ್ಪತ್ರೆ ಸೇರಬೇಕು ಎಂದು ಪ್ರಶ್ನಿಸಿದ್ದಾರೆ.
ಹೇಮಾವತಿ ಅವರಿಗೆ ಕಚ್ಚಿದ ಬೀದಿ ನಾಯಿಯನ್ನು ಭಂಡಾರಿಬೆಟ್ಟಿನ ಯುವಕರು ಅಲ್ಲಿಂದ ಅಟ್ಟಾಡಿಸಿದರೂ ಮತ್ತೆ ಶನಿವಾರ ಕಾಣಿಸಿಕೊಂಡು ಇಬ್ಬರಿಗೆ ಕಚ್ಚಿ ತನ್ನ ಪೌರುಷ ತೋರಿಸಿದೆ. ಇತ್ತೀಚೆಗೆ ಪುರಸಭೆ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ನಡೆಸಿದ್ದರೂ ಅದು ಪರಿಣಾಮಕಾರಿಯಾಗಿ ಆಗದಿರುವುದರಿಂದ ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಬಿದ್ದಿಲ್ಲ ಎಂದು ಹೇಳಲಾಗಿದೆ.