ಮಂಗಳೂರು,ಏ 30 (Daijiworld News/MSP): ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲೆಂದು ಹಾಗೂ ಅವರ ಸುರಕ್ಷತೆಗಾಗಿ ಅಬ್ಬಕ್ಕ ಪಡೆ ಸಿದ್ದವಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಪುಂಡರ, ಪೋಲಿಗಳ ಮಟ್ಟಹಾಕಲು ಅಬ್ಬಕ್ಕ ಪಡೆ ತಯಾರಾಗಿದ್ದು ನಗರದ ಸಿಟಿ ಸೆಂಟರ್ ಅವರಣದಲ್ಲಿ ಏ.30 ರ ಮಂಗಳವಾರ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಇದಕ್ಕೆ ಚಾಲನೆ ನೀಡಿದರು.
ಪೊಲೀಸ್ ಕಮಿಷನರೆಟ್ ನಲ್ಲಿರುವ ಮಹಿಳಾ ಪೊಲೀಸ್ ಗಳ ಪೈಕಿ 50 ಮಂದಿಯನ್ನು ಆಯ್ದು ಈ ಅಬ್ಬಕ್ಕ ಪಡೆ ರಚಿಸಲಾಗಿದೆ. ಇನ್ಸ್ ಪೆಕ್ಟರ್ ಶ್ರೀಕಲಾ ಅವರು ಮುಖ್ಯಸ್ಥರಾಗಿರುತ್ತಾರೆ. ಪಡೆಯನ್ನು ತಲಾ 5 ಮಂದಿಯ (ಒಬ್ಬ ಹೆಡ್ ಕಾನ್ ಸ್ಟೆಬಲ್ ಮತ್ತು ನಾಲ್ವರು ಕಾನ್ ಸ್ಟೆಬಲ್) 10 ತಂಡಗಳನ್ನಾಗಿ ವಿಂಗಡಿಸಲಾಗಿದ್ದು, ಬೀಛ್ ಕಾಲೇಜು ಆವರಣ ಮತ್ತು ಹೆಚ್ಚು ಜನ ಸಂದಣಿ ಇರುವ ತಾಣಗಳಲ್ಲಿ ಗಸ್ತು ಕಾರ್ಯಾಚರಣೆ ನಡೆಸಲಿದೆ
ಹೆಣ್ಣು ಮಕ್ಕಳು ಮತ್ತು ಮಹಿಳೆರಿಗೆ ನೀಡುವ ಕಿರುಕುಳ, ಚುಡಾಯಿಸುವಿಕೆ, ಕೀಟಲೆ ಮಾಡುವ, ಅಶ್ಲೀಲ ಕಮೆಂಟ್, ಅಸಭ್ಯ ವರ್ತನೆ ಪಿಕ್ ಪಾಕೆಟ್ ಸರಗಳ್ಳತನ ಮತ್ತಿತರ ಅಪರಾಧ ಕೃತ್ಯಗಳನ್ನು ಮಟ್ಟ ಹಾಕುವಲ್ಲಿ ಈ ಪಡೆ ಕಾರ್ಯಾಚರಿಸಲಿದೆ. ಈ ಪಡೆಯ ಸಿಬ್ಬಂದಿಗೆ ಕಪ್ಪು ಟಿ-ಶರ್ಟ್ ಮತ್ತು ಡೋಂಗ್ರಿ ಬಣ್ಣದ ಪ್ಯಾಂಟ್ ಇರುವ ಸಮವಸ್ತ್ರ ಒದಗಿಸಲಾಗಿದೆ.