ವರದಿ: ತೇಜಸ್ ಸುಳ್ಯ
ಸುಳ್ಯ, ಏ 30 (Daijiworld News/MSP): ವಿವಾಹ ಸಮಾರಂಭ ಎಂದರೆ ಅಲ್ಲಿ ಸಂಗೀತ ರಸಮಂಜರಿ, ಹಾಡು, ಸ್ಯಾಕ್ಸೋಫೋನ್ ಇತ್ಯಾದಿಗಳ ಗದ್ದಲ ಹಚ್ಚಿರುತ್ತದೆ. ಆದರೆ ಈ ಮದುವೆಯಲ್ಲಿ ಮಾಂಗಲ್ಯ ಧಾರಣೆಯ ಶುಭವೇಳೆಯಲ್ಲಿ ಯಾವುದೇ ಗದ್ದಲವಿಲ್ಲ. ಬದಲಿಗೆ ಸಂಸ್ಕೃತಿ, ಸಂಪ್ರದಾಯ ಬಗೆಗಿನ ಕೃತಿ ಬಿಡುಗಡೆ, ಕವನಗಳ ವಾಚನ ಕಾರುಣ್ಯದ ಒರತೆ ಕಂಡು ಬಂತು.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಏ.೨೧ರಂದು ನಡೆದ ಕಿರಣ ರಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ, ಯುವ ಸಾಹಿತಿ ಯೋಗೀಶ್ ಹೊಸೋಳಿಕೆ ಮತ್ತು ಸುಳ್ಯ ತಾ| ಕಚೇರಿ ಉದ್ಯೋಗಿ ಜಯಶ್ರೀ ಮಡಪ್ಪಾಡಿ ಅವರ ವಿವಾಹದ ಚಿತ್ರಣವಿದು.
ಸಾಹಿತಿ ಯೋಗೀಶ್ ಹೊಸೋಳಿಕೆ ತಮ್ಮ ಮದುವೆಯನ್ನು ಕ್ರೀಯೇಟಿವ್ ಆಗಿ ಮಾಡಬೇಕು. ಮದುವೆಗೆ ಸಾಕ್ಷಿಯಾಗುವ ಆಪ್ತರಿಗೆ ಸಮುದಾಯದ ಆಚರಣೆ, ಸಂಪ್ರದಾಯಗಳ ಕುರಿತು ಅರಿವು ಮೂಡಿಸಿ ಅದನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದರು. ಇವರೇ ಬರೆದಿರುವ ಅರೆಭಾಷೆಯ ’ಪುಣ್ಯಕೋಟಿ’ ಕೃತಿಯನ್ನು ಲೋಕರ್ಪಣೆ ಮಾಡಲಾಯಿತು. ರಾಜ್ಯ ಅರೆಭಾಷೆ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಪಿ.ಸಿ ಜಯರಾಮ ಕೃತಿ ಬಿಡುಗಡೆಗೊಳಿಸಿದರು. ಅಕಾಡೆಮಿ ಸದಸ್ಯರಾದ ಎ.ಕೆ ಹಿಮಕರ, ದಿನೇಶ್ ಹಾಲೆಮಜಲು, ಕೆ.ಟಿ ವಿಶ್ವನಾಥ ಹಾಗೂ ಪರಶುರಾಮ ಚಿಲ್ತಡ್ಕ ಉಪಸ್ಥಿತರಿದ್ದರು.
ಕವನಗಳ ವಾಚನ
ಬಳಿಕ ನಡೆದ ಆರತಕ್ಷತೆ ವೇಳೆ ಒಂಬತ್ತು ಹಿರಿಯ ಹಾಗೂ ಕಿರಿಯ ಸಾಹಿತಿಗಳು ತಾವು ಬರೆದ ಕವನಗಳನ್ನು ವಾಚಿಸಿದರು. ವಿವಾಹ ಸಂದರ್ಭ ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ಶೋಭಾನೆ ಗೀತೆ, ಹೆಣ್ಣು ಇಳಿಸಿಕೊಡುವ ವೇಳೆ ಬಳಸುವ ಹಾಡು, ಮದುಗಣಗಿತ್ತಿ ಬೆಳೆದು ಬಂದ ರೀತಿ, ಆಕೆ ತಾಯಿ ಮನೆ ತೊರೆದು ಗಂಡನ ಮನೆ ಸೇರುವ ಸನ್ನಿವೇಶ, ಅಲ್ಲಿ ಆಕೆ ಬದುಕಬೇಕಾದ ರೀತಿ, ನಿಭಾಯಿಸಬೇಕಾದ ಜವಬ್ದಾರಿ ಇತ್ಯಾದಿ ಅಂಶಗಳು ಕುರಿತು ಹಾಗೂ ಆಕೆ ಗಂಡನ ಮನೆಯಲ್ಲಿ ಪತಿ ಹಾಗೂ ಅತ್ತೆ ಮಾವನ ಬಂಧಿಯಲ್ಲಿ ಬಾಳಬೇಕಿರುವ ಸನ್ನಿವೇಶಗಳನ್ನು ಉಲ್ಲೇಖಿಸಿ ರಚಿತವಾದ ಕವಿತೆಗಳನ್ನು ಸಾಹಿತಿಗಳು ವಾಚಿಸಿದರು.
ಹಿರಿಯ ಸಾಹಿತಿಗಳಾದ ನಿವೃತ್ತ ಪ್ರಾಧ್ಯಪಕ ಬಾಬು ಮಾಸ್ತರ್ ಅಚ್ರಪ್ಪಾಡಿ, ಪ್ರಗತಿಪರ ಕೃಷಿಕ ಮತ್ತು ಸಾಹಿತಿ ಲಕ್ಷ್ಮಣ ಮಾಯಿಪನಮನೆ, ಸಂಜೀವ ಕುದ್ಪಾಜೆ, ಯು.ಸು ಗೌಡ, ದಿನೇಶ್ ಕುವೆತ್ತೋಡಿ, ಭಾಗ್ಯಶ್ರೀ ಅರ್ನೋಜಿ, ಯಶವಂತ ಕುಡೆಕಲ್ಲು ಕವನ ವಾಚಿಸಿದರು. ಸಾಹಿತಿ ಎ.ಕೆ ಹಿಮಕರ ಅವರು ಬರೆದಿರುವ ಕವನ ಸಂಕಲನ ಯುವ ಹಾಡುಗಾರ ರಮೇಶ್ ಮೆಟ್ಟಿನಡ್ಕ ಹಾಡಿದರು. ತಬಲದಲ್ಲಿ ಹರೀಶ್ ನಾಯಕ್, ಕೀಬೋರ್ಡ್ನಲ್ಲಿ ಕಡ್ಯ ವಾಸುದೇವ ಭಟ್ ಸಹಕರಿಸಿದರು.