ಮಂಗಳೂರು, ಮೇ01(Daijiworld News/SS): ಬಿಸಿಲಿನ ಜಳಕ್ಕೆ ತತ್ತರಿಸಿ ಹೋಗಿದ್ದ ಮಂಗಳೂರಿನಲ್ಲಿ ಕೆಲವೆಡೆ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ಈಗಾಗಲೇ ಜಿಲ್ಲೆಯ ವಿವಿದೆಡೆ ಸಾಧರಣ ಮಳೆಯಾಗಿದ್ದು ತಂಪೆರೆದಿದೆ.
ಇನ್ನೊಂದೆಡೆ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ‘ಫನಿ’ ತೀವ್ರ ವೇಗ ಪಡೆದುಕೊಳ್ಳುತ್ತಿದ್ದು, ಗಂಟೆಗೆ 200 ಕಿ.ಮೀ ವೇಗದಲ್ಲಿ ಬೀಸುವ ಮೂಲಕ “ಅತ್ಯಂತ ತೀವ್ರ ಸ್ವರೂಪ’ದ ಚಂಡಮಾರುತವಾಗಿ ಮಾರ್ಪಡಲಿದೆ ಎಂದು ಭಾರತೀಯ ನೌಕಾಪಡೆಯು ತಿಳಿಸಿದೆ.
ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗಗಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮೇ 3ರಂದು ಒಡಿಶಾದ ಕರಾವಳಿ ಭಾಗಕ್ಕೆ ಅಪ್ಪಳಿಸಲಿರುವ ಫನಿ ಚಂಡಮಾರುತವು ಗಂಟೆಗೆ 175 – 185 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಎಚ್ ಆರ್ ಬಿಸ್ವಾಸ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗದಲ್ಲಿ ಕೇವಲ ಮೊಡ ಕವಿದ ವಾತಾವರಣವಿದ್ದು, ಕೃಷಿಕರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ನೆತ್ತಿ ಸುಡುವ ಬಿಸಿಲ ನಡುವೆ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದೆ. ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಕೆಲವೆಡೆ ತುಂತುರು ಮಳೆಯಾಗುತ್ತಿದೆ.
ಫನಿ ಚಂಡಮಾರುತದ ಪರಿಣಾಮ ಮುಂದಿನ ಕೆಲ ದಿನ ಇದೇ ವಾತಾವರಣ ಮುಂದುವರಿಯಲಿದ್ದು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣದಲ್ಲಿ ಆದ ದಿಢೀರ್ ಬದಲಾವಣೆ ಕರಾವಳಿಯ ಜನರಿಗೆ ಸುಡು ಬಿಸಿಲಿನಿಂದ ಕೊಂಚ ಮುಕ್ತಿ ಸಿಗುವಂತೆ ತಂದಿದೆ. ಮಳೆಯ ಮೋಡಗಳು ಆಕಾಶದಲ್ಲಿ ಹೆಪ್ಪುಗಟ್ಟುತ್ತಿರುವುದನ್ನು ಕಂಡು ಜನರು ಸಂತಸಗೊಂಡಿದ್ದಾರೆ. ತುಂತುರು ಮಳೆ ನೀರಿಗೆ ಮಣ್ಣಿನ ಪರಿಮಳ ಘಂ ಎಂದು ಮೂಗಿಗೆ ತಾಕಿ ಮನಸ್ಸನ್ನು ಮುದಗೊಳಿಸಿದೆ. ವಾತಾವರಣದ ಕಾವು ಕೊಂಚ ಇಳಿದಿದೆ.
ಒಡಿಶಾ ಕರಾವಳಿಯ ಹಲವಾರು ಪ್ರದೇಶಗಳಲ್ಲಿ ಹವಾಮಾನ ಇಲಾಖೆಯು “ಹಳದಿ ಎಚ್ಚರಿಕೆ”ಯನ್ನು ಜಾರಿ ಮಾಡಿದೆ. ಒಡಿಶಾದ ಕರಾವಳಿಯಲ್ಲಿನ ಚಂಡಮಾರುತವು ಪಶ್ಚಿಮ ಬಂಗಾಳದ ಕಡೆಗೆ ತೆರಳಲಿದೆ. ಹೀಗಾಗಿ ರೈಲ್ವೆ ಸಂಚಾರವನ್ನು ರದ್ದುಪಡಿಸಬೇಕೆಂದು ಈಗಾಗಲೇ ಸೂಚಿಸಿದ್ದೇವೆ ಮತ್ತು ಜನರು ಮನಯಲ್ಲೇ ಉಳಿಯುವಂತೆ ಸಲಹೆ ನೀಡಿದ್ದೇವೆ ಎಂದು ಬಿಸ್ವಾಸ್ ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಫನಿ ಚಂಡಮಾರುತವು ತೀವ್ರಗೊಂಡರೆ ಗಂಟೆಗೆ 195 ರಿಂದ 200 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.