ಕಾಸರಗೋಡು ಮೇ 1 (Daijiworld News/MSP): ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಿಬ್ಬರು ಆರೋಪಿಗಳನ್ನು ತನಿಖಾ ತಂಡ ಬಂಧಿಸಿದೆ.
ಬಂಧಿತರನ್ನು ಪ್ರದೀಪ್ (38) ಮತ್ತು ಮಣಿ ( 32) ಎಂದು ಗುರುತಿಸಲಾಗಿದೆ. ಇದರಿಂದ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 11 ಕ್ಕೇರಿದೆ. ಪ್ರಕರಣದ ಎಂಟನೇ ಆರೋಪಿ ಸುಬೀಷ್ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಪ್ರದೀಪ್ ಕೃತ್ಯಕ್ಕೆ ಸಂಚು ನಡೆಸಿದವನು ಎಂದು ತನಿಖೆಯಿಂದ ತಿಳಿದುಬಂದಿದೆ.
ಕೃತ್ಯ ನಡೆಸಿದ ಬಳಿಕ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸುಬೀಷ್ ಹೊಸ ವಸ್ತ್ರಗಳನ್ನು ತಲುಪಿಸಿದ್ದು , ಹಾಗೂ ಸಿಪಿಎಂ ಉದುಮ ವಲಯ ಕಚೇರಿಗೆ ತಲಪಿಸಲು ಮಣಿ ನೆರವಾಗಿದ್ದ ಎಂದು ತನಿಖಾ ತಂಡ ತಿಳಿಸಿದೆ. ತಲೆ ಮರೆಸಿಕೊಂಡಿದ್ದ ಪ್ರದೀಪ್ ಏಪ್ರಿಲ್ 23 ರಂದು ಮತದಾನ ಮಾಡಲು ಮತಗಟ್ಟೆಗೆ ತಲಪಿದಾಗ ಕಾಂಗ್ರೆಸ್ ಕಾರ್ಯಕರ್ತರು ಫೋಟೋ ತೆಗೆದು ತನಿಖಾ ತಂಡಕ್ಕೆ ಹಸ್ತಾ೦ತರಿಸಿದ್ದರು . ಇದರ ಬೆನ್ನಿಗೆ ಪ್ರದೀಪ್ ಮತ್ತು ಮಣಿಯನ್ನು ಬಂಧಿಸಲಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಪೆರಿಯ ಕಲ್ಯೊಟ್ ನ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಫೆಬ್ರವರಿ 17 ರಂದು ರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಕೊಲೆ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಎಂ ಸ್ಥಳೀಯ ಮುಖಂಡ ಪೀತಾಂಬರನ್ ಸೇರಿದಂತೆ ಒಂಭತ್ತು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ಕ್ರೈಮ್ ಬ್ರಾಂಚ್ ಈಗ ತನಿಖೆ ನಡೆಸುತ್ತಿದೆ