ಕುಂದಾಪುರ ನ 18 : ಗ್ರಾಮಾಂತರ ಠಾಣೆಯಲ್ಲಿ ಕೆಲ ವಿದೇಶಿಯರು ನಿಂತಿದ್ದರು.ಅವರ ಕೈಯಲ್ಲಿ ಗನ್ ಇತ್ತು ಆದರೆ ಕುಂದಾಪುರ ಗ್ರಾಮಾಂತರ ಠಾಣಾ ಸಿಬ್ಬಂದಿಗಳು ಸುಮ್ಮನೆ ನಿಂತಿದ್ದರು. ಯಾಕೆ ಗೊತ್ತಾ ಇದು ಅವ್ರ ಕೈಯಲಿದ್ದದ್ದು ಕೇವಲ ಅಧ್ಯಯನ ಮಾಡಲಷ್ಟೇ.
ಭಾರತೀಯ ಕಲೆಗಳನ್ನು ಅಧ್ಯಯನದ ಮೂಲಕ ವಿದೇಶಿಗರಿಗೆ ತಿಳಿಸುವ ನಿಟ್ಟಿನಲ್ಲಿರುವ ಎಫ್ಎಸ್ಎಲ್ ಸಂಸ್ಥೆಯಲ್ಲಿ, ಭಾರತೀಯ ಸಂಸ್ಕೃತಿಗಳ ಅಧ್ಯಯನ ಮಾಡಲು ಬಂದ ವಿದೇಶಿಗರಿಗೆ ಪೊಲೀಸರು ಮತ್ತು ಜನಸಾಮಾನ್ಯರ ನಡುವಿನ ಸಂಬಂಧಗಳ ಬಗ್ಗೆ ಕುಂದಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ವಿವರಿಸುವ ವಿನೂತನ ಕಾರ್ಯವನ್ನ ನಡೆಸಲಾಯಿತು.
ಎಫ್ಎಸ್ಎಲ್ ಇಂಡಿಯಾದ 10 ಮಂದಿ ಪ್ರಶಿಕ್ಷಣಾರ್ಥಿಗಳು ಕುಂದಾಪುರ ಗ್ರಾಮಾಂತರ ಠಾಣೆಯ ಸುತ್ತ ಪೊಲೀಸ್ ಸಿಬ್ಬಂದಿಗಳೊಂದಿಗೆ ಗಿಡ ನೆಟ್ಟು ಠಾಣೆಯ ಸೌಂದರ್ಯವನ್ನ ಹೆಚ್ಚಿಸಿದರು.ನಂತರ ಭಾರತೀಯ ಪೊಲೀಸಿಂಗ್ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಇವರು, ಗನ್ ಮತ್ತು ಬೇಡಿ ಉಪಯೋಗಿಸುವ ವಿಧಾನ, ಭಾರತೀಯ ಪೊಲೀಸಿಂಗ್ ವ್ಯವಸ್ಥೆ ಕಾರ್ಯಾಚರಿಸುತ್ತಿರುವ ಶೈಲಿ, ಅಧಿಕಾರಿಗಳ ಗ್ರೇಡ್ ಗುರುತಿಸುವ ವಿಧಾನ ಮೊದಲಾದ ಮಾಹಿತಿಯನ್ನ ಪಿಎಸ್ಐ ಶ್ರೀಧರ್ ನಾಯ್ಕ್ ವಿವರಿಸಿದರು.ಪೊಲೀಸ್ ವ್ಯವಸ್ಥೆ ಬಗ್ಗೆ ಜನರಿಗಿರುವ ಭಯವನ್ನ ಹೋಗಲಾಡಿಸಲು ಪೊಲೀಸ್ ಇಲಾಖೆ ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, ಪೊಲೀಸ್ ವ್ಯವಸ್ಥೆಯನ್ನ ಜನರ ಬಳಿ ಕೊಂಡೊಯ್ಯುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎನ್ನಲಾಗಿದೆ.