ಮಂಗಳೂರು, ಮೇ 1 (Daijiworld News/MSP): ಎಡಿಬಿ ನೆರವಿನ ಮೊದಲ ಹಂತದ 160 ಕೋಟಿ ರೂ.ಗಳ ಕಾಮಗಾರಿ ಕಳಪೆಯಾಗಿದೆ ಇದಕ್ಕೆ ಕುಡ್ಸೆಂಪ್ ಯೋಜನೆಯ ನಿರ್ದೇಶಕರಾಗಿದ್ದಾಗ ನಾನು ಕಾರಣ ಎಂಬ ಶಾಸಕ ವೇದವ್ಯಾಸ ಕಾಮತ್ ಮಾಡಿದ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಆರೋಪ ಸಾಬೀತುಪಡಿಸಲು ಅಸಾಧ್ಯವಾದರೆ ಶಾಸಕರ ವೇದವ್ಯಾಸ ಕಾಮತ್ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಸವಾಲೆಸೆದಿದ್ದಾರೆ.
ಮೇ.1 ರ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಶಾಸಕ ವೇದವ್ಯಾಸ ಕಾಮತ್ ಅವರು ಮಾಡಿರುವ ಆರೋಪ ಸಂಪೂರ್ಣ ಸುಳ್ಳಆಗಿದ್ದು ಇದು ಬೇಜವಾಬ್ದಾರಿಯಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಿಂದ ಶಾಸಕ ಸ್ಥಾನದಲ್ಲಿರುವ ನೀವು ಕುಡಿಯುವ ನೀರು ಸಮಸ್ಯೆ ನೀಗಿಸಲು ಯಾವೆಲ್ಲಾ ಕ್ರಮ ಕೈಗೊಂಡಿದ್ದಾರೆ ಎಂದು ಮೊದಲು ತಿಳಿಸಲಿ. ಆದರೆ ಶಾಸಕರು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡದೇ ಸಮಸ್ಯೆ ಇರುವ ಕಡೆ ಹೋಗಿ ಫೋಟೋ ತೆಗೆದು ಪ್ರಚಾರ ಗಿಟ್ಟಿಸುವ ಕೆಲಸ ಮಾತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತುಂಬೆಯಲ್ಲಿ 7 ಮೀಟರ್ ಎತ್ತರದ ಡ್ಯಾಂ ನಿರ್ಮಿಸಲು ಕುಡ್ಸೆಂಪ್ ನಿರ್ದೇಶಕನಾಗಿದ್ದಾಗ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೆ. ಯೋಜನೆ 40 ಕೋಟಿ ರೂ.ಗೆ ಮಂಜೂರಾಗಿ ಉಳಿದ 13.33 ಕೋಟಿ ರೂ. ಕೆಯುಐಡಿಎಫ್ಸಿ ಹಾಗೂ 13.33 ಕೋಟಿ ರೂ. ಮಹಾನಗರ ಪಾಲಿಕೆ ಹಾಕುವಂತೆ ಅಂದಿನ ಕುಮಾರಸ್ವಾಮಿ ಸರ್ಕಾರ್ ಆದೇಶ ಮಾಡಿತ್ತು. ಆದರೆ ಅದ್ಯಾಯನದ ಬಳಿಕದ ಹೊಸ ವಿನ್ಯಾಸ ತಯಾರಿಸಿದಾಗ ಇದು ಅಂದಾಜು ವೆಚ್ಚ 75.50 ಕೋಟಿ ರೂ.ಗೆ ಏರಿಕೆಯಾಯಿತು. ಅಲ್ಲದೆ 6 ಮೀಟರ್ ಹಾಗೂ 7 ಮೀಟರ್ ನೀರು ನಿಲ್ಲಿಸಲು ಹೆಚ್ಚು ಪ್ರದೇಶ ಮುಳುಗಡೆಯಾಗುತ್ತದೆ. ಹೀಗಾಗಿ ಭೂ ಸ್ವಾಧೀನಕ್ಕೆ 120 ಕೋಟಿ ರೂ. ಸರ್ಕಾರಕ್ಕೆ ತಿಳಿಸಿದ್ದೆ. ಅಂದು ತಾತ್ಕಾಲಿಕ ಪರಿಹಾರವಾಗಿ 30 ಕೋಟಿ ರೂ. ಮಂಜೂರು ಮಾಡಿಸಿದ ಕಾರಣಕ್ಕೆ ಇಂದು 6 ಮೀಟರ್ ನೀರು ನಿಲ್ಲಿಸಲು ಸಾಧ್ಯವಾಗಿದೆ. ಆದರೆ ಸಂಪೂರ್ಣ ಮಾಹಿತಿಯೇ ತಿಳಿಯದೇ ಹಾಲಿ ಶಾಸಕರು ಈ ರೀತಿ ಆರೋಪಿಸೋದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.