ಬಂಟ್ವಾಳ ನ 18 : ನಿಯಂತ್ರಣ ತಪ್ಪಿದ ಕಾರೊಂದು ಮೂರು ವಾಹನಗಳಿಗೆ ಡಿಕ್ಕಿಯಾಗಿ ಬಳಿಕ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಪಾಣೆಮಂಗಳೂರು ಸೇತುವೆ ಬಳಿ ನ 18 ರ ಶನಿವಾರ ನಡೆದಿದೆ.
ಮೃತರನ್ನು ನೆಟ್ಲ ಮುಡ್ನೂರು ಗ್ರಾಮದ ಬಾಬನಕಟ್ಟೆ ನಿವಾಸಿ ಪುತ್ರ ರಾಕೇಶ್ ನಾಯ್ಕ (30) ಎಂದು ಗುರುತಿಸಲಾಗಿದೆ. ನೇರಳಕಟ್ಟೆ ಕೋ- ಅಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿರುವ ಇವರು, ಬಿ.ಸಿ.ರೋಡ್ ನಲ್ಲಿರುವ ಎಸ್ ಡಿ ಸಿ ಸಿ ಬ್ಯಾಂಕ್ ಗೆ ಹಣ ಜಮೆ ಮಾಡಲೆಂದು ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಕಾರ್ ಡ್ರೈವ್ ಮಾಡಿಕೊಂಡು ಬರುತ್ತಿದ್ದ ರಾಕೇಶ್ ನಿಯಂತ್ರಣ ತಪ್ಪಿ ಎದುರಿನಿಂದ ಸಂಚರಿಸುತ್ತಿದ್ದ ಬೊಲೇರೋ ಹಾಗೂ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು,ಬಳಿಕ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಪಕ್ಕದ ಗದ್ದೆಗೆ ಉರುಳಿ ಬಿದ್ದಿದ್ದು ಪರಿಣಾಮ ರಾಕೇಶ್ ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದೇ ದಾರಿಯಲ್ಲಿ ಸಾಗುತ್ತಿದ್ದ ಸಚಿವ ರಮಾನಾಥ ರೈ ಅವರು ಸ್ಥಳಕ್ಕೆ ಭೇಟಿ ನೀಡಿದರು. ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮಕೈಗೊಂಡರು.