ಬೆಳ್ತಂಗಡಿ, ಮೇ02(Daijiworld News/SS): ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 48ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆದಿದೆ.
ಸಾಮೂಹಿಕ ವಿವಾಹ ಸಮಾರಂಭದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬೀಡಿನಲ್ಲಿ ವಧುವಿಗೆ ಸೀರೆ, ರವಿಕೆ, ಹಾಗೂ ವರನಿಗೆ ಶಾಲು, ಧೋತಿ ನೀಡಿ ಹರಸಿದ್ದಾರೆ. ಹೆಗ್ಗಡೆಯವರಿಗೆ ಫಲ ಕಾಣಿಕೆ ಅರ್ಪಿಸಿದ ನೂತನ ವಧು-ವರರ ಜೋಡಿ ಬಳಿಕ ಆಶೀರ್ವಾದ ಪಡೆದರು.
102 ಜೋಡಿ ವಧು-ವರರು ಮತ್ತು ಅವರ ಕುಟುಂಬಸ್ಥರು ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡರು. ದೇವಳದ ಆವರಣದಿಂದ ವಧು-ವರರನ್ನು ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ಕರೆತರಲಾಯಿತು. ಶೃಂಗಾರಗೊಂಡ ಆನೆಗಳು, ಕೊಂಬು, ಕಹಳೆ, ಕಲಶಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಧು-ವರರು ದೇವಸ್ಥಾನಕ್ಕೆ ಒಂದು ಸುತ್ತು ಬಂದು ಅಲ್ಲಿಂದ ಮೆರವಣಿಗೆಯ ಮೂಲಕ ಸಭಾಭವನದತ್ತ ಹೆಜ್ಜೆ ಹಾಕಿದರು.
ವೈದಿಕರ ಮಂಗಳ ವೇದಘೋಷ, ವಾದ್ಯಘೋಷಗಳ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 102 ಜೋಡಿ ವಧು-ವರರು ನೂತನ ದಂಪತಿಗಳಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟರು. ಸಂಜೆ 6.48ರ ಗೋಧೂಳಿ ಸುಮುಹೂರ್ತದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಶ್ರೀ ಮಂಜುನಾಥಸ್ವಾಮಿಯ ಅನುಗ್ರಹದೊಂದಿಗೆ ಸತಿಪತಿಗಳಾದರು.
ಮಾತ್ರವಲ್ಲ ನೂತನ ದಂಪತಿಗಳು ಗಣ್ಯರ ಸಮ್ಮುಖ ಪ್ರಮಾಣ ಸ್ವೀಕರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಮಂಗಲ ಮುಹೂರ್ತದಲ್ಲಿ ಪತಿ-ಪತ್ನಿಯಾಗಿ ಪವಿತ್ರ ಬಾಂಧವ್ಯ ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ ಅರ್ಥ ಮತ್ತು ಕಾಮದಲ್ಲಿ ಸಹಚರರಾಗಿ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಇರುತ್ತೇವೆ. ಒಬ್ಬರಿಗೊಬ್ಬರು ವಂಚನೆ ಮಾಡದೆ, ದುರಭ್ಯಾಸಕ್ಕೆ ಬಲಿಯಾಗದೆ ಸಾರ್ಥಕ ಜೀವನ ನಡೆಸುತ್ತೇವೆ ಎಂದು ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿ ಹಾಗೂ ಹೆಗ್ಗಡೆಯವರ ಸಮಕ್ಷಮ ಪ್ರಮಾಣ ವಚನ ಮೂಲಕ ಬದ್ಧರಾಗುತ್ತಿದ್ದೇವೆ ಎಂದು ಕನ್ನಡ ಹಾಗೂ ತುಳುವಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.