ಕಾಸರಗೋಡು, (Daijiworld News/MSP): ಏಪ್ರಿಲ್ 23 ರಂದು ನಡೆದ ಕಾಸರಗೋಡು ಲೋಕಸಭಾ ಚುನಾವಣೆಯಲ್ಲಿ ನಕಲಿ ಮತದಾನ ಮಾಡಿದ ಸಿಪಿಎಂ ನ ಗ್ರಾಮ ಪಂಚಾಯತ್ ಸದಸ್ಯೆ ಸೇರಿದಂತೆ ಮೂವರ ವಿರುದ್ಧ ಪರಿಯಾರಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿಲಾತ್ತರ ಯು ಪಿ ಶಾಲಾ 19 ನೇ ಮತಗಟ್ಟೆ ಯಲ್ಲಿ ನಕಲಿ ಮತದಾನ ಮಾಡಿದ ಚೆರುತ್ತಾಯ ಗ್ರಾಮ ಪಂಚಾಯತ್ ಸದಸ್ಯೆ ಸಲೀನಾ , ಪಂಚಾಯತ್ ಮಾಜಿ ಸದಸ್ಯೆ ಸುಮಯ್ಯ ಮತ್ತು ಪದ್ಮಿನಿ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ ನಡೆದ ಬಗ್ಗೆ ರಾಜ್ಯ ಚುನಾವಣಾಧಿಕಾರಿ ಖಚಿತ ಪಡಿಸಿದ್ದರು. ಮತದಾನದ ಸಂದರ್ಭದ ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿದ ಚುನಾವಾಣಾಧಿಕಾರಿಗಳು ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದ್ದರು. ಇದರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೂವರನ್ನು ಪೊಲೀಸರು ವಿಚಾರಣೆ ಗೊಳಪಡಿಸುವರು . ಜಿಲ್ಲೆಯ ಬಹುತೇಕ ಮತಗಟ್ಟೆಗಳಲ್ಲಿ ನಕಲಿ ಮತದಾನ ವಾಗಿರುವ ಬಗ್ಗೆ ಘಟನೆಗಳು ಹೊರಬರುತ್ತಿದ್ದು , ಸಿಪಿಎಂ ಮತ್ತು ಮುಸ್ಲಿಂ ಲೀಗ್ ಹಿಡಿತ ಹೊಂದಿರುವ ಮತಗಟ್ಟೆಗಳ ಬಗ್ಗ್ಗೆ ಆರೋಪ ಪ್ರತ್ಯಾರೋಪ ಕೇಳಿ ಬರುತ್ತಿದೆ. ಈ ನಡುವೆ ಕಲ್ಯಾಶ್ಯೆರಿಯ ಎರಡು ಮತಗಟ್ಟೆಗಳಲ್ಲಿ ನಡೆದ ನಕಲಿ ಮತದಾನಕ್ಕೆ ಸಂಬಂಧಪಟ್ಟಂತೆ ಫಾಯಿಜ್ ಮತ್ತು ಆಶಿಕ್ ಎಂಬ ಯುವಕರಿಬ್ಬರು ಇಂದು ಕಾಸರಗೋಡು ಜಿಲ್ಲಾಧಿಕಾರಿ ಮುಂಭಾಗದಲ್ಲಿ ಹಾಜರಾಗಿ ಮಾಹಿತಿ ನೀಡುವಂತೆ ನೋಟಿಸ್ ನೀಡಲಾಗಿದೆ.