ವರದಿ: ಹರ್ಷಿಣಿ
ಉಡುಪಿ, ಮೇ 02 (Daijiworld News/MSP): ಕರಾವಳಿಯಲ್ಲಿ ದಿನದಿನಕ್ಕೆ ಉಷ್ಣತೆ ಹೆಚ್ಚಾಗುತ್ತಲೇ ಇದೆ. ಈಗಂತೂ ಇನ್ನಿಲ್ಲದ ಸೆಕೆ. ಬಿರು ಬೇಸಿಗೆಯಿಂದ ತಂಪು ಪಾನೀಯ ಕುಡಿಬೇಕು ಅನಿಸೋದು ಸಹಜ. ಆಗ ಕಣ್ಮುಂದೆ ಬರುವುದೇ ಕಲರ್ ಕಲರ್ ಕೋಲ್ಡ್ ಡ್ರಿಂಕ್ಸ್. ಆದರೆ ಹಿಂದೆಲ್ಲ ವಿದೇಶಿಯ ಪಾನೀಯಗಳು ಇರಲಿಲ್ಲ. ಏನಿದ್ದರೂ ನಿಂಬೆ ಶರಬತ್, ಮಜ್ಜಿಗೆ, ಶುಂಠಿ ಸೋಡಾ, ಹೀಗೆ ಲೋಕಲ್ ಪಾನೀಯಗಳು. ಆಧುನಿಕರಣದ ಭರಾಟೆಯಲ್ಲಿ, ವಿದೇಶಿ ಕಂಪನಿಗಳ ಪ್ರಾಬಲ್ಯದಿಂದ ಹಿಂದಿನ ಕಾಲದ ಪಾನೀಯಗಳು ಕಣ್ಮರೆಯಾಗುತ್ತಿದೆ.
ಆದರೆ ಕರಾವಳಿಯಲ್ಲಿ ಈಗಲೂ ಸಾಂಪ್ರದಾಯಿಕ ಗೋಲಿ ಸೋಡ ಅಲ್ಲಲ್ಲಿ ಅಂಗಡಿಗಳಲ್ಲಿ ಕಾಣಸಿಗುತ್ತದೆ. ಇದನ್ನ ಸುಮಾರು 59 ವರ್ಷಗಳಿಂದ ಗುಂಡಿಬೈಲು ಶೀನ ನಾಯ್ಕರು ಗೋಲಿಸೋಡ ಮಾಡುವ ಕಾಯಕವನ್ನು ಮಾಡುತ್ತಿದ್ದಾರೆ. 79 ವರ್ಷದ ಇಳಿವಯಸ್ಸಿನಲ್ಲೂ ತಮ್ಮದೊಂದು ಹಳೆಯ ಸೈಕಲ್ ಏರಿ ಬೆಳಗ್ಗೆ ಹೊರಟರೆ ಅದೆಷ್ಟು ಕಿ.ಮೀ ಸುತ್ತುತ್ತಾರೋ ಅವರೇ ಬಲ್ಲರು. ಆ ಮೂಲಕ ಸಾಂಪ್ರದಾಯಿಕ ಗೋಲಿಸೋಡಾವನ್ನು ಜೀವಂತವಾಗಿ ಉಳಿಸುವ ಪ್ರಯತ್ನದಲ್ಲಿದ್ದಾರೆ.
ಗುಂಡಿಬೈಲು ಶೀನ ನಾಯ್ಕರು ಎಂದರೆ ಎಲ್ಲರಿಗೆ ಚಿರಪರಿಚಿತ. ಸದಾ ಮುಖದಲ್ಲಿ ಮಂದಹಾಸ ಬಹುಶಃ ಇವರ ದಿನಚರಿಯನ್ನು ನೋಡುವಾಗ 59 ವರ್ಷದಿಂದ ಒಂಚೂರು ಬದಲಾಗಿಲ್ಲ. ಸದಾ ಲವಲವಿಕೆ, ಎಂದೂ ಕುಗ್ಗದ ಅವರ ಆತ್ಮ ವಿಶ್ವಾಸ, ನೋಡಿದರೆ ಎಲ್ಲರು ಬೆರಗಾಗಬೇಕು. ಇದರ ಜೊತೆಗೆ ಬೆಳಗ್ಗೆದ್ದು ಕೃಷಿ ಕೆಲಸ ಮುಗಿಸಿ ತನ್ನ ಗೋಲಿಸೋಡ ಮಾಡುವ ಕೆಲಸದಲ್ಲಿ ತೊಡಗುತ್ತಾರೆ. ದಿನಕ್ಕೆ 60-70 ಕಿ ಮೀ ಸೈಕಲ್ ಏರಿ, ಸುಮಾರು ಏಳರಿಂದ ಎಂಟು ಖಾಯಂ ಗಿರಾಕಿಗಳಿರುವಂತ ಅಂಗಡಿಗಳಿಗೆ ಮಾರಾಟ ಮಾಡ್ತಾರೆ.
ಗೋಲಿಸೋಡಾ ಪ್ರಾರಂಭಿಸಿದ ಇಂಟೆರೆಸ್ಟಿಂಗ್ ಸ್ಟೋರಿ ಏನೆಂದರೆ, ಸುಮಾರು 46 ವರ್ಷಗಳ ಹಿಂದೆ ಕಾಳಪ್ಪ ಶೆಟ್ಟರ ಬಳಿ ಗೋಲಿಸೋಡಾ ವಿತರಕರಾಗಿ ಸೇರಿದ್ದರು. ಆಗ ಅದು ದೊಡ್ಡ ಫ್ಯಾಕ್ಟರಿಯಾಗಿತ್ತು. ಆಗ ಮೂರೂ ಚಕ್ರ ಗಾಡಿಯನ್ನು ತಳ್ಳಿಕೊಂಡು ಹೋದದ್ದುಂಟು ಹಲವಾರು ಜನ ಕೂಡ ಕೆಲಸಕ್ಕೂ ಇದ್ದರು. ಬರಬರುತ್ತಾ ಸಾಫ್ಟ್ ಡ್ರಿಂಕ್ಸ್ಗಳ ಭರಾಟೆಯ ನಡುವೆ ಗೋಲಿಸೋಡಾ ಮೂಲೆಗೆ ಸೇರಿತು. ಇದರಿಂದ ಕೈಸುಟ್ಟು ಕೊಂಡ ಅಂದಿನ ಮಾಲೀಕ ಕಾಳಪ್ಪ ನವರು ಶೀನನಾಯ್ಕರಿಗೆ 70 ಸೋಡಾ ಬಾಟಲಿ, ಗ್ಯಾಸ್ ತುಂಬಿಸುವ ಮೆಷಿನ್ ನನ್ನ ಕೊಟ್ಟು, ತನಗೆ ಬಾಡಿಗೆ ಮಾತ್ರ ಕೊಟ್ಟರೆ ಸಾಕು ಎಂದು ಹೇಳಿ ಕೊಟ್ಟರು.
ಇದನ್ನೇ ಸವಾಲಿನಂತೆ ಸ್ವೀಕರಿಸಿದ ಶೀನ ನಾಯ್ಕರು ಅದನ್ನೇ ನಡೆಸುತ್ತಿದ್ದಾರೆ. ತನ್ನ ಐದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಎಲ್ಲರು ಕೆಲಸದಲ್ಲಿದ್ದಾರೆ. ಮಕ್ಕಳು ಎಷ್ಟೇ ಗೋಲಿ ಸೋಡಾ ಬಿಟ್ಟುಬಿಡಿ ಎಂದು ಹೇಳಿದರೂ, ಮುಂದಿನ ವರ್ಷ ಖಂಡಿತಾ ಬಿಡ್ತೇನೆ ಎಂದು ಮಾತು ಮರೆಸುತ್ತಾರಂತೆ ಸ್ವಾಭಿಮಾನಿ ಶೀನ ನಾಯ್ಕರು.
ಇವರು ತಯಾರಿಸುವ ಗೋಲಿ ಸೋಡಾ ದಲ್ಲಿ ಯಾವುದೇ ಕೆಮಿಕಲ್ ಇಲ್ಲ, ಸ್ವಲ್ಪ ನೀರು, ಶುಂಠಿ ಹಾಗು ಗ್ಯಾಸ್ ತುಂಬಿರುತ್ತೆ ಅಷ್ಟೇ. ಈಗ ಹಲವಾರು ಬಗೆಯ ಆಧುನಿಕ ಕಲರ್ ಫುಲ್ ತಂಪುಪಾನೀಯಗಳು ಮಾರ್ಕೆಟ್ ನಲ್ಲಿ ಜನರನ್ನು ಆಕರ್ಷಿಸಿದ್ದರೂ ಈ ಗೋಲಿ ಸೋಡಾ ಹುಡುಕಿಕೊಂಡು ಬರುವವರು ಕೂಡ ಇದ್ದಾರೆ. ಇದನ್ನ ಒಮ್ಮೆ ಕುಡಿದರೆ ಸಾಕು.. ಮನಸು ಹೊಟ್ಟೆ ಹಗುರಾಗಿ ರಿಫ್ರೆಶ್ ಆಗುತ್ತೆ.