ಉಡುಪಿ, ಮೇ02(Daijiworld News/SS): ಜಿಲ್ಲೆಯ ಪರ್ಕಳದ ಗ್ಯಾಡ್ಸನ್ ಕಾಲೋನಿಯಲ್ಲಿ ಅಪರೂಪಕ್ಕೆ ಸಾಮಾನ್ಯ ತೋಳ ಹಾವು (ಕಾಮನ್ ಊಲ್ಫ್ ಸ್ನೇಕ್) ಕಾಣಸಿಕ್ಕಿದೆ.
ಪರ್ಕಳದ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಮನೆಯಲ್ಲಿ ಈ ಅಪರೂಪದ ತೋಳ ಹಾವು ಕಂಡುಬಂದಿತ್ತು. ಸೂರಪ್ಪ ಪೂಜಾರಿ ಬೆಳಿಗ್ಗೆ ಏಳುವಾಗ ಹಾಸಿಗೆಯಲ್ಲಿ ಇದ್ದ ಈ ಹಾವನ್ನು ಕಂಡು ಒಮ್ಮೆಲೆ ಭಯಭೀತರಾಗಿದ್ದರು. ವಿಷಕಾರಿ ಹಾವಿರಬಹುದು ಎಂದು ಮನೆಯವರೆಲ್ಲರೂ ಗಾಬರಿಯಾದರು. ಆದರೆ ಹಾವು ಯಾವುದೇ ತೊಂದರೆ ಕೊಡದೇ ಒಂದು ಕಡೆ ಮುದುಡಿ ಕುಳಿತಿತ್ತು.
ಈ ವೇಳೆ ನೆರೆಮನೆಯ ಗಣೇಶ್ ರಾಜ್ ಎಂಬವರು ಬಂದು ಉರಗತಜ್ಞ ಗುರುರಾಜ ಸನಿಲ್ ಅವರಿಗೆ ಮಾಹಿತಿ ನೀಡಿದರು. ವಾಟ್ಸಾಪ್ ಮೂಲಕ ಹಾವಿನ ಫೋಟೋ ಕಳುಹಿಸಿದರು. ಗುರುರಾಜ್ ಸನಿಲ್ ಫೋಟೋ ನೋಡಿ ಅದು ತೋಳ ಹಾವು, ವಿಷಕಾರಿಯಲ್ಲ, ಕೊಲ್ಲಬೇಡಿ ಎಂದು ಹೇಳಿದರು.
ತಕ್ಷಣ ಸ್ಥಳಕ್ಕೆ ಬಂದ ಗುರುರಾಜ ಸನಿಲ್ ಮತ್ತು ಸ್ಥಳೀಯ ಉರಗಪ್ರೇಮಿಗಳು ಈ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿನಲ್ಲಿ ಬಿಟ್ಟಿದ್ದಾರೆ.
ತೋಳ ಹಾವು ವಿಷಕಾರಿ ಅಲ್ಲ. ಮನುಷ್ಯನಿಗೆ ಬಹಳ ಉಪಕಾರಿ ಹಾವು. ಆದರೇ ಅದು ಪಕ್ಕನೆ ನೋಡುವಾಗ ಅತೀ ವಿಷಕಾರಿ ಕಡಂಬಳ ಹಾವಿನಂತೆ(ಇಂಡಿಯನ್ ಕಾಮನ್ ಕ್ರೈಟ್ ಸ್ನೇಕ್) ಇರುವುದರಿಂದ ಜನರು ಅದನ್ನು ಕೊಲ್ಲುವುದೇ ಜಾಸ್ತಿ ಎಂದು ಉರಗತಜ್ಞ ಗುರುರಾಜ್ ಸನಿಲ್ ವಿಷಾದಿಸಿದ್ದಾರೆ.
ಸೂರಪ್ಪ ಪೂಜಾರಿ ಮನೆಯಲ್ಲಿ ಸಿಕ್ಕಿದ್ದು ಮರಿ ಹಾವು, ಸುಮಾರು 6 ಇಂಚು ಉದ್ದವಿದೆ. ಪ್ರೌಢ ಹಾವು 20 ಇಂಚುವರೆಗೆ ಳೆಯುತ್ತದೆ. ಇವುಗಳ ಮುಖ್ಯ ಆಹಾರವೇ ಹಲ್ಲಿ. ಅದನ್ನು ಹುಡುಕಿಕೊಂಡು ಮನೆಯೊಳಗೆ ಬರುತ್ತವೆ. ಅನೇಕ ಸಲ ಮನೆಯೊಳಗೆ ಹುಟ್ಟಿ ಬೆಳೆದು, ಅಲ್ಲಿಯೇ ಸಾಯುತ್ತವೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆದ್ದರಿಂದ ಈ ಮರಿ ಹಾವು ಪತ್ತೆಯಾಗಿದೆ ಎಂದು ಹೇಳಿದ್ದಾರೆ.