ಬೆಂಗಳೂರು, ಸೆ.09: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಒಂದೆಡೆ ಸೆಪ್ಟಂಬರ್ 12ರಂದು ‘ಸೌಹಾರ್ದ ನಡೆ’ಗೆ ತಯಾರಿ ನಡೆಸುತ್ತಿದ್ದರೆ ಮತ್ತೊಂದೆಡೆ ಈ ಕಾರ್ಯಕ್ರಮವನ್ನು ಕೈಬಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಥ ರೈಯವರನ್ನು ರಾಜ್ಯ ಗೃಹಸಚಿವ ರಾಮಲಿಂಗ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.
“ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಅಭಿಯಾನ, ಕಾರ್ಯಕ್ರಮಕ್ಕೆ ಸರಕಾರ ಅನುಮತಿ ನೀಡುವುದಿಲ್ಲ. ಹಾಗೊಂದು ವೇಳೆ ಅದು ನಡೆದರೂ ಸಮಾಜದ ಎಲ್ಲಾ ವರ್ಗದ ಜನರನ್ನು ಜೊತೆ ಸೇರಿಸಿಕೊಂಡು ನಡೆಯಬೇಕು” ಎಂದು ರೆಡ್ಡಿ ತಿಳಿಸಿದರು.
ಜಿಲ್ಲೆಯಲ್ಲಿ ಸೆಪ್ಟಂಬರ್ 7ರಂದು ನಡೆದ ಬಿಜೆಪಿ ಆಯೋಜಿತ ‘ಮಂಗಳೂರು ಚಲೋ” ಜಾಥಾದಿಂದ ಜಿಲ್ಲೆಯಲ್ಲಿ ಕದಡಿರುವ ಶಾಂತಿಯನ್ನು ಮರುಸ್ಥಾಪಿಸುವ ಸಲುವಾಗಿ ಮತ್ತು ಜನರಲ್ಲಿ ಸೌಹಾರ್ದ ಮೂಡಿಸುವ ಸಲುವಾಗಿ ಕಾಂಗ್ರೆಸ್ ಸೆಪ್ಟಂಬರ್ 12ರಂದು ಫರಂಗಿಪೇಟೆಯಿಂದ ಮಾಣಿವರೆಗೆ “ಸೌಹಾರ್ದ ನಡೆ”ಯನ್ನು ಆಯೋಜಿಸಲು ಉದ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ಗೃಹಸಚಿವ ರಾಮಲಿಂಗ ರೆಡ್ಡಿಯವರ ಈ ಹೇಳಿಕೆ ಬಹಳ ಪ್ರಾಮುಖ್ಯತೆ ಪಡೆದಿದೆ.
ಮಂಗಳೂರು ಚಲೋ ಜಾಥಾದ ವೇಳೆ ಪ್ರತಿಭಟನಾಕಾರರನ್ನು ನಿಭಾಯಿಸುವುದು ಪೊಲೀಸ್ ಹಾಗೂ ಜಿಲ್ಲಾಡಳಿತದ ಪಾಲಿಗೆ ಸವಾಲಿನ ಕೆಲಸವಾಗಿದ್ದರೂ ಕೆಲವು ಸಣ್ಣಪುಟ್ಟ ಘರ್ಷಣೆಗಳ ಹೊರತಾಗಿ ಇಡೀ ಕಾರ್ಯಕ್ರಮ ಸುಸೂತ್ರವಾಗಿಯೇ ನಡೆದಿತ್ತು. ಆದರೂ ಇಂಥಾ ಕಾರ್ಯಕ್ರಮಗಳು ಸಮಾಜದ ಶಾಂತಿಯನ್ನು ಕದಡುತ್ತವೆ ಎಂದು ಹೇಳಿರುವ ರೆಡ್ಡಿ ಮುಂದೆ ಇಂಥಾ ಕಾರ್ಯಕ್ರಮಗಳನ್ನು ನಡೆಸದಂತೆ ಮನವಿ ಮಾಡಿದ್ದಾರೆ.