ಕುಂದಾಪುರ,ಮೇ 02 (Daijiworld News/MSP): ತಾನು ದುಡಿಯಬೇಕು, ದುಡಿದ ಹಣದಲ್ಲಿ ಇಂದಷ್ಟು ಭಾಗವನ್ನು ಅಸಹಾಯಕರಿಗೆ ಹಂಚಬೇಕು ಆ ಮೂಲಕ ಯಾವುದೇ ಫಲಾಪೇಕ್ಷೆಯಿಲ್ಲದೇ ಒಂದಿಷ್ಟು ಸಮಾಜ ಸೇವೆ ಮಾಡಬೇಕು ಎನ್ನುವ ಯುವಕರು ಒಟ್ಟು ಸೇರಿ ವಿದೇಶದಲ್ಲಿ ದುಡಿದು ಕರ್ನಾಟಕದ ಒಂದಷ್ಟು ಅಸಹಾಯಕ ಕುಟುಂಬಗಳಿಗೆ ಸಹಾಯಹಸ್ತ ನೀಡುತ್ತಿರುವ ಅಪರೂಪದ ಪ್ರಯತ್ನವೊಂದು ನಡೆಯುತ್ತಿದೆ. ಇಸ್ರೇಲ್ ಹೇಲ್ಪಿಂಗ್ ಫಂಡ್ ಗ್ರೂಪ್ ಮತ್ತು ಸಿ.ಮೈನ್ಆರ್ ಎನ್ನುವ ಸಂಘಟನೆಯೇ ಇಂತದ್ದೊಂದು ಸದ್ದಿಲ್ಲದೆ ಬಡವರ ಬಾಳಿಗೆ ಬೆಳಕಾಗುವ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಿಂದ ನಡೆಸುತ್ತಾ ಬಂದಿದೆ.
ಅಸಹಾಯಕರ ಕಣ್ಣೀರಿನ ಹನಿಯನ್ನು ಒರೆಸುವ ಕಾರ್ಯವನ್ನು ದಿನಕರ ಪುತ್ರನ್ ನೇತ್ರತ್ವದ ಇಸ್ರೇಲ್ ಹೇಲ್ಪಿಂಗ್ ಫಂಡ್ ಗ್ರೂಪ್ ಮತ್ತು ಸಿ.ಮೈನಾರ್ ತಂಡ ಮಾಡಿದ್ದು, ಕುಂದಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಬಡವರು ಮತ್ತು ಅಸಹಾಯಕರನ್ನು ಗುರುತಿಸಿ ಒಂದೆ ದಿನದಲ್ಲಿ ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ಹಣವನ್ನು ಈ ಸಂಘದ ಪ್ರತಿನಿಧಿ ಶಶಿಕಾಂತ್ ಅವರು ನೀಡಿದ್ದಾರೆ.
ಅಸ್ಥಿಮಜ್ಜೆ ಸಮಸ್ಯೆಯಿಂದ ಬಳಲುತ್ತಿದ್ದ ಬಳಲುತ್ತಿದ್ದ ಅಮಾಸೆಬೈಲು ಮಚ್ಚಟ್ಟು ನಿವಾಸಿ ಗಣೇಶ ಬೊವಿ ಇವರಿಗೆ ಹದಿನೈದು ಸಾವಿರ, ಬಳ್ಕೂರು ಗ್ರಾಮದ ಹನ್ನೊಂದು ತಿಂಗಳು ಮಗು ರೊಷೀತಳ ದೇಹ ದೌರ್ಬಲ್ಯ ಸಮಸ್ಯೆಗೆ ಹದಿನೈದು ಸಾವಿರ, ಎರಡು ಕಣ್ಣುಗುಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದ ಹರೇಗೊಡು ಗ್ರಾಮದ ಆಕಾಶ ದೇವಾಡಿಗನಿಗೆ ಹದಿನೈದು ಸಾವಿರ, ಹೆಮ್ಮಾಡಿ ಗ್ರಾಮದ ಆಸಿಯಾ ಬಡತನದ ಸಮಸ್ಯೆಗೆ ಹತ್ತು ಸಾವಿರ, ರೋಹಿಯ ಬಡತನದ ಸಮಸ್ಯೆಗೆ ಹದಿನೈದು ಸಾವಿರ, ಮುವತ್ತುಮುಡಿ ನಿವಾಸಿ ನಾಗರತ್ನ ಬಡತನ ಸಮಸ್ಯೆಗೆ ಇಪ್ಪತ್ತು ಸಾವಿರ, ಮರವಂತೆ ಗ್ರಾಮದ ಎಂಟು ವರ್ಷ ಪ್ರಾಯದ ಸುಮಿತ್ ಭಂಡಾರಿಯ ದೇಹ ದೌರ್ಬಲ್ಯ ಸಮಸ್ಯೆಗೆ ಹದಿನೈದು ಸಾವಿರ, ಕೊಳುರು ಗ್ರಾಮದ ನಿವಾಸಿ ನಲವತ್ತೈದು ವರ್ಷ ಪ್ರಾಯದ ಗೋಪಾಲ ಮಡಿವಾಳರ ಬೆನ್ನುಮೂಳೆ ಮುರಿತಕ್ಕೆ ಇಪ್ಪತ್ತು ಸಾವಿರ ರೂಪಾಯಿ ಸೇರಿದಂತೆ ಒಟ್ಟು ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ಹಣವನ್ನು ಒಂದೆ ದಿನದಲ್ಲಿ ಸಂಸ್ಥೆಯ ಕಾರ್ಯಕರ್ತರಾಗಿರುವ ಶಶಿಕಾಂತ್ ಬಡವರ ಮನೆ ಬಾಗಿಲಿಗೆ ತೆರಳಿ ಚೆಕ್ಕ್ ರೂಪದಲ್ಲಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ ನಿವೃತ್ತ ಸೈನಿಕರೊಬ್ಬರ ಮನೆಗೆ ತೆರಳಿ ನಲವತ್ತು ಸಾವಿರ ರೂಪಾಯಿ ಹಣವನ್ನು ಚೆಕ್ಕ್ ರೂಪದಲ್ಲಿ ನೀಡಿದ್ದಾರೆ.
ಉದ್ಯೋಗಕ್ಕಾಗಿ ಹಲವು ಆಸೆಗಳನ್ನು ಹೊತ್ತು ಇಸ್ರೇಲ್ಗೆ ತೆರಳಿದ ಕರಾವಳಿ ಮೂಲದ ಹದಿನೈದು ಜನ ಯುವಕರ ತಂಡವೊಂದು ದಿನಕರ ಪುತ್ರನ್ ಎಂಬುವರ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಈ ಸಾಧನೆ ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಇಸ್ರೇಲ್ ಹೇಲ್ಪಿಂಗ್ ಫಂಡ್ ಎಂಬ ಗುಂಪೊಂದನ್ನು ರಚನೆ ಮಾಡಿಕೊಂಡು, ಸಿ.ಮೈನಾರ್ ಎನ್ನುವ ಇನ್ನೊಂದು ಸಂಘಟನೆಯ ಜೊತೆ ಸೇರಿ ಭಾರತದ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಸಹಾಯಕರನ್ನು ಗುರುತಿಸಿ ವೈದ್ಯಕೀಯ ನೆರವಿಗೆ ಸಹಕರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹದಿನೆಂಟು ಬಡ ಕುಟುಂಬಗಳಿಗೆ ಮತ್ತು ಶೋಷಿತರು, ನಿವೃತ್ತ ಸೈನಿಕರಿಗು ಸೇರಿದಂತೆ ಒಟ್ಟು ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿ ಮೊತ್ತವನ್ನು ಚೆಕ್ ರೂಪದಲ್ಲಿ ಸಹಾಯ ನೀಡಲಾಗಿದೆ.
ಪ್ರತೀ ವರ್ಷವೂ ಇದೇ ರೀತಿಯ ಅಸಹಾಯಕರಿಗೆ ಧನ ಸಹಾಯ ಮಾಡಲು ಈ ತಂಡ ಯೋಜನೆ ರೂಪಿಸಿಕೊಂಡಿದ್ದು, ಇಸ್ರೇಲ್ನಲ್ಲಿ ಕಳೆದ ಎರಡು ವರ್ಷಗಳಿಂದ ಇಸ್ರೇಲ್ ಹೆಲ್ಪಿಂಗ್ ಫಂಡ್ ಗ್ರೂಪ್ ಮತ್ತು ಸಿ.ಮೈನಾರ್ ಸದಸ್ಯರು ಒಂದು ಡಬ್ಬ ಮಾಡಿಕೊಂಡು ಅಲ್ಲಿನ ನಿವಾಸಿಗಳಿಂದ ಹಣವನ್ನು ಸಂಗ್ರಹಿಸುತ್ತಾರೆ. ಅಲ್ಲದೇ ಗ್ರೂಪ್ ನ ಸದಸ್ಯರು ತಮ್ಮ ದುಡಿಮೆಯ ಹಣದಲ್ಲಿ ತಿಂಗಳೊಂದಕ್ಕೆ ಇಪ್ಪತ್ತು ಸಾವಿರ ರೂಪಾಯಿ ಹಣವನ್ನು ಸಹ ಒಂದುಗೂಡಿಸಿಕೊಂಡು ಪ್ರತಿ ತಿಂಗಳು ಗ್ರೂಪಿನ ಒಬ್ಬ ಸದಸ್ಯನ ಮನೆಯ ಪರಿಸರದಲ್ಲಿ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಗುರುತಿಸುವುದರ ಜೊತೆಗೆ ರಾಜ್ಯದಲ್ಲಿ ಅತೀ ನೊಂದ ಕುಟುಂಬಗಳನ್ನು ಆಯ್ದುಕೊಳ್ಳಲಾಗುತ್ತದೆ. ಬಳಿಕ ಸಂಘಟನೆಯ ಪ್ರತಿನಿಧಿಗಳು ಊರಿಗೆ ಬರುವ ಸಂದರ್ಭದಲ್ಲಿ ಆಯಾ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ವಿತರಿಸಲಾಗುತ್ತದೆ. ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಈ ಸಂಘಟನೆಯಿಂದ ಸುಮಾರು ಹದಿನೆಂಟು ಕುಟುಂಬಗಳಿಗೆ ಮೂರು ಲಕ್ಷದ ಅರವತ್ತು ಸಾವಿರಕ್ಕೂ ಹೆಚ್ಚು ಹಣವನ್ನು ನೀಡುವ ಮೂಲಕ ಬಡವರ ಪಾಲಿಗೆ ಬೆಳಕಾಗಿದ್ದಾರೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿರುವ ಅಪರೂಪದಲ್ಲಿ ಅಪರೂಪವಾಗಿರುವ ಇಸ್ರೇಲ್ ಹೇಲ್ಪಿಂಗ್ ಫಂಡ್ ಗ್ರೂಪ್ ಮತ್ತು ಸಿ.ಮೈನಾರ್ ಗ್ರೂಪಿನ ಸದಸ್ಯರಿಗೆ ಇನ್ನಷ್ಟು ಬಡವರಿಗೆ ಸಹಾಯ ಹಸ್ತ ನೀಡುವ ಶಕ್ತಿ ದೊರಕಲಿ ಎಂದು ಹಾರೈಸೋಣ