ಕಾಸರಗೋಡು, ಮೇ 02 (Daijiworld News/MSP): ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ವ್ಯಾನ್ ಸುಮಾರು 35 ಅಡಿ ಆಳದ ಮನೆಯ ಅಂಗಳಕ್ಕೆ ಉರುಳಿ ಬಿದ್ದ ಪರಿಣಾಮ ತಾಯಿ ಮತ್ತು ಪುತ್ರ ಮೃತಪಟ್ಟು , ಮೂವರು ಗಾಯಗೊಂಡ ಘಟನೆ ಮೇ 02 ರ ಮಧ್ಯಾಹ್ನ ಪೆರ್ಲ - ಪುತ್ತಿಗೆ ರಸ್ತೆಯ ಬಾಡೂರು ಓಣಿಬಾಗಿಲು ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಪೆರ್ಲದ ಮುಹಮ್ಮದ್ ಷರೀಫ್ (38 ) ಮತ್ತು ತಾಯಿ ಬೀಫಾತಿಮ್ಮ (58) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 1.30 ರ ಸುಮಾರಿಗೆ ಅಪಘಾತ ನಡೆದಿದೆ.
ಪುತ್ತಿಗೆ ಮುಗುನಲ್ಲಿರುವ ಪತ್ನಿಯ ಸಹೋದರನ ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ಕುಟುಂಬ ಸಹಿತ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಓಣಿಬಾಗಿಲು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಉರುಳಿ ಬಿದ್ದು ಈ ದಾರುಣ ಅಪಘಾತ ನಡೆದಿದೆ.
ಅಪಘಾತದಲ್ಲಿ ಷರೀಫ್ ರ ಪತ್ನಿ ಖೈರುನ್ನೀಸಾ (28), ಮಕ್ಕಳಾದ ಶ೦ನಾ (10) ಹಾಗೂ ಶಹಾರ್ ಬಾನು (6) ಗಂಭೀರ ಗಾಯಗೊಂಡಿದ್ದು , ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ . ಈ ಪೈಕಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಅಪಘಾತದ ಶಬ್ದ ಕೇಳಿ ಧಾವಿಸಿ ಬಂದ ಪರಿಸರವಾಸಿಗಳು ವ್ಯಾನ್ ನಲ್ಲಿ ಸಿಲುಕಿದವರನ್ನು ಹರಸಾಹಸದಿಂದ ಹೊರತೆಗೆದರು. ಆದರೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.
ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ. ಬದಿಯಡ್ಕ ಠಾಣಾ ಪೊಲೀಸರು ಪೀರಕಾರಣ ದಾಖಲಿಸಿಕೊಂಡಿದ್ದಾರೆ. ಅಬ್ದುಲ್ ಷರೀಫ್ ಮುಂಬೈಯಲ್ಲಿ ಹೋಟೆಲ್ ಕ್ಯಾಶಿಯರ್ ಆಗಿ ದುಡಿಯುತ್ತಿದ್ದು , ಲೋಕಸಭಾ ಚುನಾವಣೆ ಮೊದಲು ಊರಿಗೆ ಬಂದಿದ್ದರು. ನಾಳೆ ಮುಂಬೈಗೆ ಮರಳುವ ಸಿದ್ಧತೆಯಲ್ಲಿದ್ದರು.