ವಿಟ್ಲ, ಮೇ 02 (Daijiworld News/SM): ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಿದ ಹಿನ್ನೆಲೆ ಗ್ರಾಮ ಪಂಚಾಯತ್ ಸಿಬ್ಬಂದಿಗೆ ಸಂಘ ಪರಿವಾರದ ಕಾರ್ಯಕರ್ತ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿಯಲ್ಲಿ ನಡೆದಿದೆ.
ಪೆರುವಾಯಿ ಅಶ್ವತನಗರದ ಯತೀಶ್ ಹಲ್ಲೆ ನಡೆಸಿದ ಆರೋಪಿ. ಪೆರುವಾಯಿ ಗ್ರಾಮ ಪಂಚಾಯತ್ ಸಿಬ್ಬಂದಿ ದುಗ್ಗಪ್ಪ ನಾಯ್ಕ ಹಲ್ಲೆಗೊಳಗಾದವರು. ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬದಿಯಾರ್ ಕ್ರಾಸ್ ಬಳಿಯ ರಸ್ತೆ ಬದಿಯಲ್ಲಿ ಬ್ಯಾನರ್ ವೊಂದನ್ನು ಅಳವಡಿಸಲಾಗಿತ್ತು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣಾ ಆಯೋಗದ ಆದೇಶದಂತೆ ಗ್ರಾ.ಪಂಚಾಯತ್ ಸಿಬ್ಬಂದಿ ದುಗ್ಗಪ್ಪ ಎಂಬವರು ಬ್ಯಾನರ್ ತೆರವುಗೊಳಿಸಿದ್ದಾರೆ.
ಆದರೆ, ಇದನ್ನು ಪ್ರಶ್ನಿಸಿ ಯತೀಶ್ ಹಾಗೂ ದುಗ್ಗಪ್ಪ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಯತೀಶ್ ದುಗ್ಗಪ್ಪರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.