ಉಳ್ಳಾಲ, ಮೇ 02 (Daijiworld News/SM): ಕಡಲ್ಕೊರೆತದಿಂದ ತೀವ್ರ ಹಾನಿಗೊಳಗಾಗುತ್ತಿರುವ ಸುಭಾಷನಗರ, ಕೈಕೋ, ಹಿಲೆರಿಯಾನಗರ ಪ್ರದೇಶಕ್ಕೆ ಶಾಶ್ವತವಾದ, ನೂತನವಾದ ತಡೆಗೋಡೆ ನಿರ್ಮಾಣಕ್ಕೆ ಎಡಿಬಿಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಉಳ್ಳಾಲ ಕಡಲ್ಕೊರೆತಕ್ಕೆ ಒಳಗಾಗುವ ಕಿಲೆರಿಯಾನಗರ, ಸುಭಾಷನಗರ ಭೇಟಿ ನೀಡಿ ಮಾತನಾಡಿದರು. ಮೊಗವೀರಪಟ್ನ, ಕೋಡಿ, ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ಸಂಭವಿಸುತ್ತಲೇ ಇತ್ತು. ಹಂತಹಂತವಾಗಿ ಶಾಶ್ವತ ತಡೆಗೋಡೆ ಕಾಮಗಾರಿ ಕೈಗೊಂಡ ಪರಿಣಾಮ ಇದೀಗ ಆ ಭಾಗಗಳಲ್ಲಿ ಕಡಲ್ಕೊರೆತ ಕಡಿಮೆಯಾಗಿದೆ.
ಆದರೆ ಸುಭಾಷನಗರ, ಕೈಕೋ, ಹಿಲೆರಿಯಾನಗರಗಳಲ್ಲಿ ಕಳೆದ ಎರಡು ಮಳೆಗಾಲದಲ್ಲಿ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಿ, ವ್ಯಾಪಕ ಹಾನಿ ಸಂಭವಿಸುತ್ತಿದೆ. ಅದಕ್ಕಾಗಿ ನೂತನವಾಗಿರುವ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಎಡಿಬಿ ಅನುದಾನ ಬಿಡುಗಡೆಗೊಳಿಸಿದ್ದರೂ, ಟೆಂಡರ್ ಪ್ರಕ್ರಿಯೆಗೆ ಚುನಾವಣಾ ನೀತಿ ಸಂಹಿತೆಯಿಂದ ಅಡ್ಡಿಯಾಗಿದೆ. ಅದಕ್ಕಾಗಿ ಸ್ಥಳಕ್ಕೆ ತುರ್ತಾಗಿ ಭೇಟಿ ನೀಡಿ, ಜನರ ತೊಂದರೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗೆ ತುರ್ತು ಕ್ರಮಕ್ಕೆ ಆದೇಶಿಸಿದ್ದೇನೆ. ಅದಕ್ಕಾಗಿ ವಿಶೇಷ ಅನುದಾನವನ್ನು ಮೀಸಲಿಟ್ಟು, ಬರುವ ಮಳೆಗಾಲದಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.