ಉಡುಪಿ, ಮೇ 02 (Daijiworld News/SM): ಉಡುಪಿ ಜಿಲ್ಲಾ ನಾಗರಿಕ ಸಮಿತಿ ಜಂಟಿಯಾಗಿ, ಸುಡು ಬಿಸಿಲಲ್ಲಿ ದಾಹ ತಣಿಸಲು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದೆ. 'ಜಲ ಕುಟೀರ'ವನ್ನು ಚಿತ್ತರಂಜನ್ ಸರ್ಕಲ್ ಬಳಿಯ ಮಾರುತಿ ವಿಥೀಕಾದಲ್ಲಿ ಸ್ಥಾಪಿಸಿದ್ದಾರೆ. ಅದರ ಉದ್ಘಾಟನೆ ನಡೆಸಲಾಯಿತು.
ಮೃತ್ತಿಕೆ ಹೂಜಿಗೆ ಬಿಸಿಲ ತಾಪದ ರಕ್ಷಣೆಗೆಂದು ತೃಣ ಕುಟೀರವನ್ನು ಕಲಾವಿದ ರಮೇಶ್ ಕಿದಿಯೂರು ಕಲಾತ್ಮಕವಾಗಿ ರಚಿಸಿದ್ದು ಗಮನ ಸೆಳೆಯುತ್ತಿದೆ. ಇಪ್ಪತ್ತು ಲೀಟರಿನಷ್ಟು ನೀರು ತುಂಬುವ ಸಾಮರ್ಥ್ಯ ಹೊಂದಿರುವ ಎರಡು ಮೃತ್ತಿಕೆ ಹೂಜಿಯಲ್ಲಿ ನೀರು ತುಂಬಿಡುವ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ಮೃತ್ತಿಕೆ ಹೂಜೆಯು ನೀರನ್ನು ತಂಪಾಗಿಸುವ ಗುಣ ಹೊಂದಿದರಿಂದ ಜಂಟಿ ಸಮಿತಿಯವರು ಹೂಜೆಯನ್ನು ಆಯ್ಕೆ ಮಾಡಿದ್ದಾರೆ. ಹಳೆ ಸಂಪ್ರದಾಯಕ್ಕೆ ಮರುಜೀವ ನೀಡಿದ್ದಾರೆ. ಬಳಲಿದವರಿಗೆ ಜಲದಾನ ಮಾಡುವ ಯೋಜನೆಯು ಮೆಚ್ಚುಗೆಗೆ ಪಾತ್ರವಾಗಿದೆ. "ಜೀವಜಲ ಅಮೂಲ್ಯ" "ನೀರನ್ನು ಮಿತವಾಗಿ ಬಳಸಿ" ಸಂದೇಶ ವಾಕ್ಯದ ಫಲಕವನ್ನು ಇಲ್ಲಿ ಅಳವಡಿಸಿ ಜಲ ಜಾಗೃತಿ ಮೂಡಿಸಲಾಗಿದೆ.