ಬಂಟ್ವಾಳ, ಮೇ 03(Daijiworld News/SM): ವಿವಾದ ಸೃಷ್ಟಿಯಾಗಿರುವ ಫರಂಗಿಪೇಟೆ ರೈಲ್ವೇ ಲೆವೆಲ್ ಕ್ರಾಸ್ ನ ಸ್ಥಳಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಎ.ಸಿ.ರವಿ ಚಂದ್ರ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಫರಂಗಿಪೇಟೆ ಕುಂಪಣಮಜಲುವಿನಿಂದ ಮೇರೆಮಜಲು ಸಂಪರ್ಕದ ಫರಂಗಿಪೇಟೆಯ ರೈಲ್ವೇ ಲೆವೆಲ್ ಕ್ರಾಸ್ ನ್ನು ಇಲಾಖೆ ಕಾಮಗಾರಿಯ ನೆಪವೊಡ್ಡಿ ಶಾಶ್ವತವಾಗಿ ಸಂಪರ್ಕದ ಕೊಂಡಿಯನ್ನು ಕಳಚಿ ಹಾಕಿತ್ತು. ಇದರಿಂದ ಆಕ್ರೋಶಿತರಾದ ಸ್ಥಳೀಯ ನಿವಾಸಿಗಳು ಎರಡು ಬಾರಿ ಈ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ರೈಲ್ವೇ ಲೆವೆಲ್ ಕ್ರಾಸ್ ಮಾಡಲು ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ವಿನಂತಿ ಮಾಡಿದ್ದರು. ಆದರೆ ಇಲಾಖೆಯವರು ಇವರ ಪ್ರತಿಭಟನೆಗೆ ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಸಚಿವ ಖಾದರ್ ಅವರಿಗೆ ಸ್ಥಳೀಯ ಪ್ರಮುಖರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಹಿತ ಪೋಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ತವಾದ ಪರಿಹಾರ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಶುಕ್ರವಾರದಂದು ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲು ವ್ಯವಸ್ಥೆ ಮಾಡುವ ಭರವಸೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೀಡಿದರು.