ಮಂಗಳೂರು, ಮೇ03(Daijiworld News/SS): ಇತಿಹಾಸ ಪ್ರಸಿದ್ದ ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾ ದಂಡರುದ್ರಾಭಿಷೇಕ ವೈದಿಕ ವಿಧಿ ವಿಧಾನಗಳು ಆರಂಭಗೊಂಡಿದೆ.
ಕ್ಷೇತ್ರದ ಪ್ರಧಾನ ದೇವರಾದ ಶ್ರೀ ಸ್ವಾಮಿ ಮಂಜುನಾಥ ಹಾಗೂ ಪರಿವಾರ ದೇವರಿಗೆ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾದಂಡರುದ್ರಾಭಿಷೇಕದ ವೈದಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಈಗಾಗಲೇ ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ಮಧುಪರ್ಕ, ಅಗ್ನಿ ಜನನ, ಅಧ್ವಗಣಯಾಗ ನಡೆದಿದೆ. ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ದಿಕ್ಪಾಲ ಬಲಿ, ಮಲರಾಯ ಭಂಡಾರ ಆಗಮನ, ಧ್ವಜಾರೋಹಣ, ಅಂಕುರಾರೋಹಣ, ಉತ್ಸವ ಬಲಿ, ಭೂತ ಬಲಿ ಮೊದಲಾದ ವೈದಿಕ ವಿಧಿವಿಧಾನಗಳು ನಡೆದಿದೆ.
ಪುಣ್ಯ ಕಾರ್ಯದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರವನ್ನು ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುದೀಪಗಳಿಂದ ಶೃಂಗರಿಸಲಾಗಿದೆ. ಕದ್ರಿ ಮಠಾಧೀಶರಾದ ಶ್ರೀ ರಾಜಾನಿರ್ಮಲನಾಥ್ ಜೀ ಉಪಸ್ಥಿತಿಯಲ್ಲಿ ದೇರೆಬೈಲು ಬ್ರಹ್ಮಶ್ರೀ ಶ್ರೀ ವಿಠಲದಾಸ್ ತಂತ್ರಿವರೇಣ್ಯರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.
ಮೇ.3ರಂದು ಮಧ್ಯಾಹ್ನ 3 ಗಂಟೆಗೆ ಹಸಿರು ಹೊರೆಕಾಣಿಕೆಯ ಹೊರೆ ದಿಬ್ಬಣವು ಬಹಳ ವಿಜೃಂಭಣೆಯಿಂದ ಮಂಗಳೂರಿನ ನೆಹರೂ ಮೈದಾನದಿಂದ ಹೊರಡಲಿದೆ.
ಬ್ರಹ್ಮಕಶಾಭಿಷೇಕದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಹೊರಭಾಗದಲ್ಲಿ ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ಗೆ ಕದ್ರಿ ಕ್ರೀಡಾಂಗಣ ಹಾಗೂ ಇತರ ಮೂರು ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದೇವಾಲಯವನ್ನು ವಿದ್ಯುದ್ದೀಪಾಲಂಕಾರದಿಂದ ಅಲಂಕರಿಸಲಾಗಿದೆ.