"ಅಪ್ಪ್ತೆಟೀಚರ್" ಇದು ತುಳುವಿನಲ್ಲಿ ಇತ್ತೀಚೆಗೆ ತಾನೆ ಸೆಟ್ಟೇರಿದ ಸಿನಿಮಾ. ಜತೆಗೆ ಹಲವು ವಿಶೇಷತೆಯನ್ನು ಒಳಗೊಂಡ ಚಿತ್ರ . ಅಪ್ಪೆ ಅಂದ ಕ್ಷಣ ಅಲ್ಲಿ ಸೆಂಟಿಮೆಂಟ್ ಇರಲೇಬೇಕು. ಯಾಕೆಂದರೆ ತಾಯಿಯ ಸ್ಥಾನವೇ ಅಂಥದ್ದು..ಇದೇ ಸಬ್ಜೆಕ್ಟ್ ನ್ನು ಹಿಡಿದುಕೊಂಡು ಒಂದು ಸುಂದರ ಕಥೆ ಹೆಣೆದಿರುವ ಮೂಡುಬಿದ್ರೆಯ ಕಿಶೋರ್ ಈ ಸಿನಿಮಾ ಮೂಲಕವೇ ಸಹ ನಿರ್ದೇಶಕರ ಸ್ಥಾನದಿಂದ ನಿರ್ದೇಶಕರಾಗಿ ಭಡ್ತಿ ಹೊಂದಿದ್ದಾರೆ. ತಾಯಿ ಪಾತ್ರದ ಸುತ್ತ ಹೆಣೆದಿರುವ ಕಥೆ ತನ್ನ ಟೈಟಲ್ ನಂತೆಯೇ ಅಮ್ಮನೇ ಮಗುವಿನ ಮೊದಲ ಗುರು ಎನ್ನುವ ಥೀಮ್ ಇಟ್ಟುಕೊಂಡೇ ಸಿನಿಮಾ ನಿರ್ಮಿಸಲು ಹೊರಟಿದ್ದಾರೆ ಚಿತ್ರದ ನಿರ್ದೇಶಕರು. ಇದೆಲ್ಲಾ ಕೇಳಿದ ಮೇಲೆ ಇಂದೊಂದು ಪಕ್ಕ ಸೆಂಟಿಮೆಂಟ್ ಚಿತ್ರ ಅಂದ್ರೆ ನಿಮ್ಮ ಊಹೆ ತಪ್ಪು. ಕಾರಣ ಬರಪೂರ ಹಾಸ್ಯದೊಂದಿಗೆ ಸೆಂಟಿಮೆಂಟ್ ಎಳೆಯೊಂದು ಮಿಶ್ರವಾದಂತೆ ಚಿತ್ರದ ಕಥೆಯನ್ನು ಹೆಣೆದಿದ್ದೇನೆ ಅನ್ನುತ್ತಾರೆ ಕಿಶೋರ್ ಮೂಡುಬಿದ್ರೆ. ಚಿತ್ರದಲ್ಲಿ ಕನ್ನಡದ ಅನೇಕ ಧಾರವಾಹಿಗಳಲ್ಲಿ ಅಭಿನಯಿಸಿರುವ ಧರ್ಮಸ್ಥಳದ ಸುನೀಲ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯ ಹುಡುಕಾಟದಲ್ಲಿದ್ದ ಯುವ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದು ಮಲ್ಟಿ ಟ್ಯಾಲೆಂಟೆಡ್ ಆಗಿರುವ ಪುತ್ತೂರಿನ ನಿರೀಕ್ಷಾ ಶೆಟ್ಟಿ. ಇವರು ಮೊದಲ ಬಾರಿಗೆ ಈ ಚಿತ್ರದ ಮೂಲಕ ಕ್ಯಾಮರಾ ಫೇಸ್ ಮಾಡಿದ್ದಾರೆ. "ಸ್ವಯಂಪ್ರಭಾ ಬ್ಯಾನರ್ " ನಲ್ಲಿ ತಯಾರಾಗ್ತ ಇರೋ ಚಿತ್ರವನ್ನು ಕೆ. ರತ್ನಾಕರ್ ನಿರ್ಮಿಸುತ್ತಿದ್ದಾರೆ . 30-35 ದಿನಗಳ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ಮುಗಿಸೋ ಪ್ಲಾನ್ ನಲ್ಲಿರುವ ಚಿತ್ರತಂಡ ಸದ್ಯ ಮಂಗಳೂರಿನ ಶಕ್ತಿನಗರದಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.
ಅನೇಕ ತುಳು, ಕೊಂಕಣಿ ಹಾಗೂ ಧಾರಾವಾಹಿಗಳಲ್ಲಿ ಕೆಲಸ ಮಾಡಿ ಅನುಭವ ಉಳ್ಳ ಯುವ ನಿರ್ದೇಶಕರು ತಮ್ಮ ಚೊಚ್ಚಲ ಸಿನಿಮಾದ ಕಲಾವಿದರನ್ನು ಆಳೆದು ತೂಗಿ ಆಯ್ಕೆ ಮಾಡಿದಂತೆ ಕಾಣುತ್ತದೆ. ಅಪ್ಪೆ ಪಾತ್ರದಲ್ಲಿ ಉಷಾ ಭಂಡಾರಿ, ಅಮ್ಮೇರ್ ಪಾತ್ರದಲ್ಲಿ ಗೋಪಿನಾಥ್ ಭಟ್, ಗೌರವ ಪಾತ್ರದಲ್ಲಿ ಸಿನಿಮಾದೊಳಗೊಬ್ಬ ಸಿನಿಮಾ ನಿರ್ದೇಶಕನಾಗಿ ಆಗಿ ದೇವದಾಸ್ ಕಾಪಿಕಾಡ್, ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಹಿತೇಶ್ ಕಾಪಿನಡ್ಕ, ಬೋಜರಾಜ ವಾಮಂಜೂರು, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಚಿತ್ರವನ್ನು ಉದಯ್ ಲೀಲಾ ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯಲಿದ್ದು, ಪ್ರದೀಪ್ ನಾಯಕ್ ಅವರ ಸಂಕಲನವಿದೆ. ವನೀಲ್ ವೇಗಸ್ ಅವರ ಸಂಗೀತವಿದ್ದರೆ ರವೀಂದ್ರ ಪ್ರಭು ಅವರ ರಾಗ ಸಂಯೋಜನೆ ಇದೆ.