ಉಡುಪಿ, ಮೇ 03 (Daijiworld News/MSP): ಕಳೆದ ನಾಲ್ಕು ತಿಂಗಳ ಹಿಂದೆ ಮೀನುಗಾರಿಕೆಗೆಂದು ತೆರಳಿದ ಸುವರ್ಣ ತ್ರಿಭುಜ ಬೋಟ್ ಯಾರ ಸಂಪರ್ಕಕ್ಕೂ ಸಿಗದೆ ಆಕಸ್ಮಿಕವಾಗಿ ನಾಪತ್ತೆಯಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಸುದ್ದಿಯಾಗಿದ್ದ ಈ ಘಟನೆ ಎಲ್ಲರಲ್ಲೂ ಆಶ್ಚರ್ಯ ವ್ಯಕ್ತಪಡುವಂತೆ ಮಾಡಿತ್ತು. ಮೀನುಗಾರರ ಪತ್ತೆ ಕಾರ್ಯಕ್ಕೆ ಶಾಸಕರಾದ ಕೆ ರಘುಪತಿ ಭಟ್ ಅವರು ನಿರಂತರ ಶ್ರಮಿಸುತ್ತಲೇ ಇದ್ದು, ಕಳೆದ ನಾಲ್ಕು ದಿನಗಳ ಹಿಂದೆ ಸ್ವತಃ ತಾವೇ ನೌಕಾದಳದ ಅಧಿಕಾರಿಗಳ ಜೊತೆ ಹಡಗಿನಲ್ಲಿ ಪತ್ತೆ ಕಾರ್ಯಕ್ಕೆ ತೆರಳಿದ್ದರು.
ಇದೀಗ ಮಹಾರಾಷ್ಟ್ರದ ಮಾಲ್ವಾನ್ ಎಂಬ ಪ್ರದೇಶದಲ್ಲಿ ನಾಪತ್ತೆಯಾದ ಮೀನುಗಾರರ ಬೋಟ್ ಪತ್ತೆಯಾಗಿದ್ದು, ಸ್ವತಃ ನೌಕಾದಳದ ಅಧಿಕಾರಿಗಳೇ ಖಚಿತ ಪಡಿಸಿದ್ದಾರೆ. 9 ಜನ ಮೀನುಗಾರರು ಮತ್ತು ಶಾಸಕ ರಘುಪತಿ ಭಟ್ ಅವರು ನೌಕಾಪಡೆಯ ವಿಶೇಷ ಹಡಗಿನಲ್ಲಿ ಕಾರ್ಯಾಚರಣೆಗೆ ತೆರಳಿದ್ದು ಇದೀಗ 64 ಮೀಟರ್ ಆಳದಲ್ಲಿ ಹಡಗಿನ ಅವಶೇಷಗಳು ಪತ್ತೆಯಾಗಿದೆ. ಇದನ್ನು ಸ್ವತಃ ನೌಕಾದಳದ ಅಧಿಕಾರಿಗಳು ಫೋಟೋ ಚಿತ್ರೀಕರಣ ಮಾಡಿದ್ದು ಪತ್ತೆಯಾದ ಅವಶೇಷಗಳು ಸುವರ್ಣ ತ್ರಿಭುಜ ಹಡಗಿನದ್ದೇ ಎಂದು ಧೃಢಪಡಿಸಿದ್ದಾರೆ.
ಇತ್ತೀಚೆಗೆ ನಾಪತ್ತೆಯಾದ ಮೀನುಗಾರರ ಕುಟುಂಬ 'ನಮ್ಮನ್ನೂ ಹುಡುಕಾಟದ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳಬೇಕು' ಎಂದು ಮನೆಯವರು ಪಟ್ಟು ಹಿಡಿದಿದ್ದರು. 'ಮೀನುಗಾರರು ನಾಪತ್ತೆಯಾದ ಸ್ಥಳವನ್ನು ನಾವು ನೋಡಬೇಕು' ಎಂದು ಮನವಿ ಮಾಡಿದ್ದರು. ಅದರಂತೆ ಭಾರತೀಯ ನೌಕಾಪಡೆ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.
ಮೀನುಗಾರರ ಜೊತೆಗೆ ತಮಗೂ ಕಾರ್ಯಾಚರಣೆಗೆ ಅವಕಾಶ ಮಾಡಿಕೊಟ್ಟ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮಾನ್, ಪ್ರಧಾನಿ ನರೇಂದ್ರ ಮೋದಿಜೀ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಶಾಸಕರಾದ ಕೆ ರಘುಪತಿ ಭಟ್ ಅವರು ವಿಶೇಷ ಧನ್ಯವಾದ ತಿಳಿಸಿದ್ದಾರೆ.