ಮಂಗಳೂರು,ಮೇ 03 (Daijiworld News/MSP): ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ 617 ವಿದ್ಯಾರ್ಥಿಗಳೆಲ್ಲರೂ ಪಾಸಾಗಿ ಶೇ 100 ಫಲಿತಾಂಶ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 41 ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಗಳಲ್ಲಿ ತುಳು ಭಾಷೆಯ ಪಠ್ಯ ಕಲಿಸಲಾಗುತ್ತಿದ್ದು ಈ ಪೈಕಿ 34 ಶಾಲೆಗಳ 617 ವಿದ್ಯಾರ್ಥಿಗಳು 10ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 585 ವಿದ್ಯಾರ್ಥಿಗಳು ಮತ್ತು ಉಡುಪಿ ಜಿಲ್ಲೆಯ 32 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳೂ ಪಾಸಾಗಿದ್ದು 63 ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.
6ನೇ ತರಗತಿಯಲ್ಲಿ ತುಳು ಕಲಿಕೆ ಆರಂಭವಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅತೀ ಹೆಚ್ಚು ಅಂದರೆ 989 ವಿದ್ಯಾರ್ಥಿಗಳು ತುಳು ಭಾಷೆಯನ್ನು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪುತ್ತೂರಿನ 16 ಶಾಲೆಗಳಲ್ಲಿ ತುಳು ತರಗತಿಗಳು ನಡೆಯುತ್ತಿವೆ. ಬೆಳ್ತಂಗಡಿಯ 10 ಶಾಲೆಗಳಲ್ಲಿ 387 ವಿದ್ಯಾರ್ಥಿಗಳು, ಸುಳ್ಯದ 3 ಶಾಲೆಯಲ್ಲಿ 168 ವಿದ್ಯಾರ್ಥಿಗಳು, ಬಂಟ್ವಾಳದ 3 ಶಾಲೆಯಲ್ಲಿ 151 ವಿದ್ಯಾರ್ಥಿಗಳು, ಮಂಗಳೂರಿನ 4 ಶಾಲೆಗಳಲ್ಲಿ 222 ವಿದ್ಯಾರ್ಥಿಗಳು ವಿವಿಧ ತರಗತಿಗಳಲ್ಲಿ ತುಳುವನ್ನು ಒಂದು ಭಾಷೆಯನ್ನಾಗಿ ಕಲಿಯುತ್ತಿದ್ದಾರೆ. ಉಡುಪಿಯ 5 ಶಾಲೆಗಳಲ್ಲಿ ಒಟ್ಟು 149 ವಿದ್ಯಾರ್ಥಿಗಳು ತುಳು ಭಾಷೆಯನ್ನು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪುತ್ತೂರಿನ ಪ್ರಗತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 33 ವಿದ್ಯಾರ್ಥಿಗಳು ತುಳು ಪರೀಕ್ಷೆ ಬರೆದಿದ್ದು, 18 ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಶೇ 100 ಅಂಕ ಪಡೆದಿದ್ದರೆ, ಕನ್ನಡ ಮಾಧ್ಯಮದ ಶಾಲೆಯಲ್ಲಿ ಪರೀಕ್ಷೆ ಬರೆದ 24 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ಶೇ 100 ಅಂಕ ಗಳಿಸಿದ್ದಾರೆ.
‘ತುಳುವಿನಲ್ಲಿ ಉತ್ತಮ ಸಾಧನೆ ದಾಖಲಿಸುವ ಮೂಲಕ ಶಾಲೆಗಳ ಫಲಿತಾಂಶ ಹಾಗೂ ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಏರಿಕೆಯಾಗಿದೆ. ಮುಂದಿನ ವರ್ಷಗಳಲ್ಲಿ ತುಳು ಪಠ್ಯ ಬೋಧನೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು’ ಎಂದು ತುಳು ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.