ಉಡುಪಿ, ಮೇ 03 (Daijiworld News/MSP): ನೌಕಾಪಡೆಯ ಐಎನ್ಎಸ್ ಕೊಚ್ಚಿನ್ ಹಡಗು ಡಿಕ್ಕಿ ಹೊಡೆದ ಪರಿಣಾಮ ಸುವರ್ಣ ತ್ರಿಭುಜ ಬೋಟ್ ಸಮುದ್ರದಲ್ಲಿ ಮುಳುಗಿದೆ. ನೌಕಾದಳ ಮೀನುಗಾರರ ಕಗ್ಗೊಲೆ ನಡೆಸಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಪ್ರಮೋದ್ ಮಧ್ವರಾಜ್ ನೌಕಾಪಡೆಯ ಐಎನ್ಎಸ್ ಕೊಚ್ಚಿನ್ ಹಡಗಿನ ತಳಭಾಗಕ್ಕೆ ಹಾನಿಯಾಗಿರುವ ಫೋಟೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಮಧ್ವರಾಜ್ , " ಸುವರ್ಣ ತ್ರಿಭುಜ ದೋಣಿ ನಾಪತ್ತೆ ಪ್ರಕರಣದಲ್ಲಿ ಮೀನುಗಾರರ ಸಾವಿಗೆ ಕಾರಣವಾದ ಮತ್ತು ಬೋಟ್ ದುರಂತಕ್ಕೀಡು ಮಾಡಿದ ನೌಕಾದಳದ ಬೃಹತ್ ಯುದ್ದನೌಕೆ ಐಎನ್ಎಸ್ ಕೊಚ್ಚಿನ್ ತಳಭಾಗದಲ್ಲಿ ಆಗಿರುವ ಹಾನಿಯ ಚಿತ್ರ ನನಗೆ ಇಂದು ಲಭಿಸಿದೆ. ಈ ಹಿನ್ನಲೆಯಲ್ಲಿ ಅದನ್ನು ನಾನು ಬಿಡುಗಡೆಗೊಳಿಸುತ್ತಿದ್ದೇನೆ.
ಪ್ರಧಾನಮಂತ್ರಿಗಳು ತಕ್ಷಣ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕರಾವಳಿಯ ಸಮಸ್ತ ಮೀನುಗಾರರು ಮತ್ತು ಅವರ ಕುಟುಂಬದ ಪರವಾಗಿ ಆಗ್ರಹ ಮಾಡುತ್ತಿದ್ದೇನೆ" ಎಂದು ಮಧ್ವರಾಜ್ ಒತ್ತಾಯ ಮಾಡಿದ್ದಾರೆ.
"ದೇಶದ ರಕ್ಷಣೆ ಹಾಗೂ ಸಮುದ್ರದಲ್ಲಿ ಮೀನುಗಾರರ ರಕ್ಷಣೆಯ ಜವಾಬ್ದಾರಿ ಹೊತ್ತ ನೌಕೆಯ ಅಧಿಕಾರಿಗಳ ಬೇಜವ್ದಾರಿ ವರ್ತನೆಯಿಂದ ಮೀನುಗಾರರ ಹತ್ಯೆ ನಡೆದಿದೆ. ಈ ಬಗ್ಗೆ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಮಾಹಿತಿ ಸಿಕ್ಕಿದ್ದರೂ ಅದನ್ನು ಕೇಂದ್ರ ರಕ್ಷಣಾ ಇಲಾಖೆ ಮತ್ತು ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಮರೆಮಾಚಿ , ಗೌಪ್ಯವಾಗಿ ಇಡುವ ಪ್ರಯತ್ನ ಮಾಡಲಾಗಿತ್ತು ಎನ್ನುವ ವಿಚಾರವನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ" ಎಂದಿದ್ದಾರೆ.
ಬಿಜೆಪಿ ನಾಯಕರಿಗೆ ಮತ್ತು ಕೇಂದ್ರ ಸರಕಾರಕ್ಕೆ ತಾಕತ್ತಿದ್ದರೆ ಸುಪ್ರೀಂ ಕೊರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಈ ವಿಚಾರದ ಸತ್ಯಾಸತ್ಯಗಳನ್ನು ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದ್ದಾರೆ.