ಬಂಟ್ವಾಳ, ಮೇ 03 (Daijiworld News/SM): ತಾಲೂಕಿನ ಪುದು ಗ್ರಾಮದ ಸುಜೀರ್ ನೇತ್ರಾವತಿ ನದಿ ತೀರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದಾ ಮರಳುಗಾರಿಕಾ ಅಡ್ಡೆಗೆ ಬಂಟ್ವಾಳ ಉಪವಿಭಾಗದ ಎಎಸ್ಪಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಿಟಾಚಿಯಿಂದ ಡ್ರೆಜ್ಜಿಂಗ್ ಮೂಲಕ ನೇತ್ರಾವತಿ ನದಿಯ ಹಿನ್ನೀರಿನಿಂದ ಮರಳು ತೆಗೆದು ಅದನ್ನು ಫಿಲ್ಟರ್ ಮಾಡಿ ಬಳಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಈ ದಾಳಿ ನಡೆಸಿದ ಎ.ಎಸ್.ಪಿ. ಸೈದುಲ್ ಅಡಾವತ್ ನೇತೃತ್ವದ ಪೊಲೀಸ್ ತಂಡ ಕೋಟ್ಯಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮೂರು ಟಿಪ್ಪರ್ ಲಾರಿಗಳು, ಎರಡು ಹಿಟಾಚಿ, ಒಂದು ಜನರೇಟರ್, ಮರಳು ಫಿಲ್ಟರ್ ಮಾಡುವ ಯುನಿಟ್, ಸುಮಾರು 35 ಲೋಡ್ ನಷ್ಟು ಶೇಖರಿಸಿಡಲಾದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದರ ಒಟ್ಟು ಮೌಲ್ಯ 1.65 ಕೋ.ರೂಪಾಯಿ ಎಂದು ಅಂದಾಜಿಸಲಾಗಿದೆ. ದಾಳಿಯ ವೇಳೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.